ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ದಕ್ಷಿಣ ಆಫ್ರಿಕಾಬ್ಲೋಮ್ಫಾಂಟೀನ್

 (ದ. ಆಫ್ರಿಕಾ) ಮಾ.5, ಲುಂಗಿ ಎನ್ಗಿಡಿ (58ಕ್ಕೆ 6) ಮಾರಕ ಬೌಲಿಂಗ್ ಮತ್ತು ಜೆನ್ಮನ್ ಮಲಾನ್ (129*) ಅವರ ಅಜೇಯ ಶತಕದ ಬಲದಿಂದ ಮಿಂಚಿದ ದಕ್ಷಿಣ ಆಫ್ರಿಕಾ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಜಯದೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ.ಇಲ್ಲಿನ ಮ್ಯಾಂಗಾವುಂಗ್ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 272 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಬ್ಯಾಟ್ಸ್ಮನ್ ಜೆನ್ಮನ್ ಮಲಾನ್ ಅಜೇಯ 129 ರನ್ಗಳನ್ನು ದಾಖಲಿಸಿ ಇನ್ನು 9 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.ಇದಕ್ಕೂ ಮುನ್ನ ಡೇವಿಡ್ ವಾರ್ನರ್ (23 ಎಸೆತಗಳಲ್ಲಿ 35 ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದಿದ್ದ ಆಸ್ಟ್ರೇಲಿಯಾ ತಂಡ ಬಳಿಕ ಬಲಗೈ ವೇಗಿ ಲುಂಗಿ ಎನ್ಗಿಡಿ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು.ಪ್ರವಾಸಿಗರಿಗೆ ಸ್ಫೋಟಕ ಆರಂಭ ಕೊಟ್ಟ ವಾರ್ನರ್ಗೆ ಪೆವಿಲಿಯನ್ ದಾರಿ ತೋರಿಸಿ ವಿಕೆಟ್ಗಳ ಖಾತೆ ತೆರೆದುಕೊಂಡ ಎನ್ಗಿಡಿ ಬಳಿಕ ಆಸೀಸ್ನ ಬ್ಯಾಟಿಂಗ್ ಬೆನ್ನೆಲುಬಾಗಿರುವ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಕಾಂಗರೂ ಪಡೆಯ ಸದ್ದಡಗಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 50 ವಿಕೆಟ್ಗಳನ್ನು ಪಡೆದ ಮೈಲುಗಲ್ಲನ್ನೂ ಮುಟ್ಟಿದರು.ಆಘಾತ ಅನುಭವಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಡಾರ್ಸಿ ಶಾರ್ಟ್ (69*) ಅರ್ಧಶತಕದ ಮೂಲಕ ಆಸರೆಯಾದರೆ, ಎಚ್ಚರಿಕೆಯಿಂದ ಬ್ಯಾಟ್ ಮಾಡಿ 69 ರನ್ಗಳಿಸಿದ್ದ ಆಸೀಸ್ ನಾಯಕ ಆರೊನ್ ಫಿಂಚ್ ವೇಗಿ ಎನ್ರಿಚ್ ನಾರ್ಟ್ಜ್ಗೆ ವಿಕೆಟ್ ಒಪ್ಪಿಸಿದರು. ಕೊನೆಯ 51 ಎಸೆತಗಳಲ್ಲಿ 47 ರನ್ಗಳಿಸಲು 6 ವಿಕೆಟ್ಗಳನ್ನು ಕಳೆದುಕೊಂಡ ಆಸೀಸ್ 271ಕ್ಕೆ ಆಲ್ಔಟ್ ಆಯಿತು.ಪಂದ್ಯದಲ್ಲಿ 58ಕ್ಕೆ 6 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಗೌರವ ಪಡೆದ ಎನ್ಗಿಡಿ, ಏಕದಿನ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಂತ ವೇಗವಾಗಿ 50 ವಿಕೆಟ್ಗಳನ್ನು ಪಡೆದ ಬೌಲರ್ ಎನಿಸಿಕೊಂಡರಲ್ಲದೆ ಮಾಜಿ ವೇಗಿ ಲೊನ್ವಾಬೊ ತ್ಸೊತ್ಸೊಬೆ ದಾಖಲೆ ಮುರಿದರು.ಪಾರ್ಲ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 74 ರನ್ಗಳ ಜಯ ದಾಖಲಿಸಿದ್ದ ದಕ್ಷಿಣ ಆಫ್ರಿಕಾ ಇದೀಗ ಶನಿವಾರ ಪಾಟ್ಶೆಫ್ಸ್ಟ್ರೂಮ್ನಲ್ಲಿ ನಡೆಯಲಿರುವ 3ನೇ ಪಂದ್ಯದಲ್ಲಿ ಆಸೀಸ್ ಮಣಿಸಿ ಸರಣಿ ವೈಟ್ವಾಷ್ ಮಾಡುವ ಗುರಿ ಹೊಂದಿದೆ.ಸಂಕ್ಷಿಪ್ತ ಸ್ಕೋರ್ಆಸ್ಟ್ರೇಲಿಯಾ: 271 ಆಲ್ಔಟ್ (ಆರೊನ್ ಫಿಂಚ್ 69, ಡಾರ್ಸಿ ಶಾರ್ಟ್ 69*; ಲುಂಗಿ ಎನ್ಗಿಡಿ 58ಕ್ಕೆ 6).ದಕ್ಷಿಣ ಆಫ್ರಿಕಾ: 4 ವಿಕೆಟ್ಗೆ 274 (ಜೆನ್ಮನ್ ಮಲಾನ್ 129*, ಹೆನ್ರಿಚ್ ಕ್ಲಾಸೆನ್ 51; ಆಡಮ್ ಝಾಂಪ 48ಕ್ಕೆ 2).