ಬೆಂಗಳೂರು, ಮಾ.11,ಇತ್ತೀಚೆಗಷ್ಟೇ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದ ರೌಡಿಶೀಟರ್ ಸ್ಲಂ ಭರತ್ ನ ಸಹಚರನೋರ್ವನ ಮೇಲೆ ಪೊಲೀಸರು ಗುಂಡು ಹಾರಿಸಿ ಬಿಇಎಲ್ ಲೇಔಟ್ ನಲ್ಲಿ ಬಂಧಿಸಿದ್ದಾರೆ.ಸಿದ್ದರಾಜು ಅಲಿಯಾಸ್ ಸಿದ್ಧ ಗುಂಡೇಟು ತಿಂದ ರೌಡಿಶೀಟರ್.ಬಿಇಎಲ್ ಲೇಔಟ್ ಬಳಿ ಸಿದ್ದರಾಜು ಇರುವ ಖಚಿತ ಮಾಹಿತಿ ಮೇರೆಗೆ ಬ್ಯಾಡರ ಹಳ್ಳಿ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು.ಆರೋಪಿ ಸಿದ್ದರಾಜು ಗೆ ಪೊಲೀಸರು ಶರಣಾಗುವಂತೆ ಸೂಚಿಸಿದ್ದರು. ಆದರೆ, ಈ ವೇಳೆ ಆತ ಮುಖ್ಯಪೇದೆ ಗುರುದೇವ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗುವಂತೆ ಸಿದ್ದರಾಜುಗೆ ಸೂಚಿಸಿದ್ದರು. ಆದರೆ, ಆತ ಪೊಲೀಸರ ಮಾತಿಗೆ ಕಿವಿಗೊಡದೆ ಪರಾರಿಯಾಗಲು ಯತ್ನಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ಬಲಗಾಲಿಗೆ ಬ್ಯಾಡರ ಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ರಾಜೀವ್, ಗುಂಡು ಹಾರಿಸಿದ್ದಾರೆ. ತಕ್ಷಣ ಕುಸಿದು ಬಿದ್ದ ಆತನನ್ನು ಸುತ್ತುವರಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಿದ್ಧ ಬೇಕಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸದ್ಯ ಮುಖ್ಯ ಪೇದೆ ಗುರುದೇವ್ ಹಾಗೂ ಆರೋಪಿ ಸಿದ್ದರಾಜುಗೆ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಬ್ಯಾಡರ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.