ಭಾರತ ಮಹಿಳಾ ತಂಡದ ದೊಡ್ಡ ಶಕ್ತಿ ಶಫಾಲಿ ವರ್ಮಾ: ಬ್ರೆಟ್ ಲೀ

ಸಿಡ್ನಿ, ಮಾ 3, ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ವುಮೆನ್ ಶಫಾಲಿ ವರ್ಮಾ ಅವರನ್ನು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಶ್ಲಾಘಿಸಿದ್ದಾರೆ.ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಣಾಹಣಿಗಾಗಿ ಸಜ್ಜಾಗುತ್ತಿದೆ. ಎಲ್ಲ ಪಂದ್ಯಗಳ ಗೆಲುವಿನಲ್ಲಿ ಶಫಾಲಿ ವರ್ಮಾ ಅತ್ಯುತ್ತಮ ಪಾತ್ರವಹಿಸಿದ್ದರು. 16ರ ಪ್ರಾಯದ ಆಟಗಾರ್ತಿ ಟಿ20 ಕ್ರಿಕೆಟ್ನಲ್ಲಿ 147.97 ಸ್ಟ್ರೈಕ್ ರೇಟ್ನೊಂದಿಗೆ 438 ರನ್ ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 161 ರನ್ ಬಾರಿಸಿದ್ದಾರೆ. ಇದರಲ್ಲಿ ಶ್ರೀಲಂಕಾ ವಿರುದ್ಧ ಗಳಿಸಿದ್ದ 47 ರನ್ ಅವರ ಟೂರ್ನಿಯ ಗರಿಷ್ಠ ಮೊತ್ತವಾಗಿದೆ.“ಶಫಾಲಿ ವರ್ಮಾ ಅತ್ಯದ್ಭುತ ಅಗ್ರ ಕ್ರಮಾಂಕದ ಬ್ಯಾಟ್ಸ್ವುಮೆನ್ ಆಗಿದ್ದಾರೆ. ಇವರ ಭಯರಹಿತ ಬ್ಯಾಟಿಂಗ್ ಭಾರತಕ್ಕೆ ಆಸರೆಯಾಗಲಿದೆ. ಇವರ ಬ್ಯಾಟಿಂಗ್ ನೋಡಲು ಅದ್ಭುತವಾಗಿರುತ್ತದೆ,’’ ಎಂದು ಬ್ರೆಟ್ ಲೀ ಗುಣಗಾನ ಮಾಡಿದರು. ಕಳೆದ 2018ರಲ್ಲಿಯೂ ಭಾರತ ಸೆಮಿಫೈನಲ್ ತಲುಪಿತ್ತು. ಆದರೆ, ಫೈನಲ್ಗೇರುವಲ್ಲಿ ವಿಫಲವಾಗಿತ್ತು. ಇದೀಗ ಮೊಟ್ಟ ಮೊದಲ ಬಾರಿ ಭಾರತ ವನಿತೆಯರು ಚುಟಕು ವಿಶ್ವಕಪ್ ಫೈನಲ್ ತಲುಪುವ ತುಡಿತ ಹೊಂದಿದ್ದಾರೆ.“ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿಯೇ ಶಫಾಲಿ ವರ್ಮಾ ಅವರ ಬ್ಯಾಟಿಂಗ್ ಗಮನಿಸಿದ್ದೆ. ಎ ಗುಂಪಿನ ಅಗ್ರ ಸ್ಥಾನದಲ್ಲಿಯೇ ಭಾರತ ತನ್ನ ಲಯವನ್ನೇ ಮುಂದುವರಿಸಿದರೆ ಯಾವುದೇ ಅಚ್ಚರಿ ಇಲ್ಲ. ಹಿಂದೆಂದೂ ಭಾರತ ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿರಲಿಲ್ಲ. ಆದರೆ, ಈ ಬಾರಿ ತಂಡ ಸಂಪೂರ್ಣ ವಿಭಿನ್ನವಾಗಿದೆ. ಹಲವು ಪ್ರತಿಭಾವಂತ ಆಟಗಾರ್ತಿಯರು ತಂಡದಲ್ಲಿ ಇದ್ದಾರೆ,’’ ಎಂದು ಬ್ರೆಟ್ ಲೀ ತಿಳಿಸಿದರು.“ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕ್ರಮವಾಗಿ ಶಫಾಲಿ ವರ್ಮಾ ಹಾಗೂ ಪೂನಮ್ ಯಾದವ್ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಅಷ್ಟೆ ಅಲ್ಲದೇ, ಭಾರತದಲ್ಲಿ ವಿಶ್ವ ಶ್ರೇಷ್ಠ ಆಟಗಾರ್ತಿಯರನ್ನು ಒಳಗೊಂಡಿದೆ,” ಎಂದು ಬ್ರೆಟ್ ಲೀ ಅಭಿಪ್ರಾಯ ವ್ಯಕ್ತಪಡಿಸಿದರು.ಭಾರತ ತಂಡ ಎ ಗುಂಪಿನ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಮಾರ್ಚ್ 5 ಗುರುವಾರ ಸೆಮಿಫೈನಲ್ ಕಾದಾಟ ನಡೆಯಲಿದೆ.