ಭಾರತದ ಹೆಮ್ಮೆಯ ಆಟಗಾರ್ತಿ ಶಫಾಲಿ ವರ್ಮಾ: ಸ್ಮೃತಿ ಮಾಂಧನ

ಮೆಲ್ಬೋರ್ನ್‌, ಮಾ 9, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಫೈನಲ್‌ಹಣಾಹಣಿಯಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ 85 ರನ್‌ಗಳಿಂದ ಸೋಲು ಅನುಭವಿಸಿದರೂ ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಮಾಡಿದ 16ರ ಹರೆಯದ ಶಫಾಲಿ ವರ್ಮಾ ಹೆಮ್ಮೆಯ ಆಟಗಾರ್ತಿ ಎಂದು ಸಹ ಆರಂಭಿಕ ಬ್ಯಾಟ್ಸ್‌ವುಮೆನ್ ಸ್ಮೃತಿ ಮಾಂಧನ ಶ್ಲಾಘಿಸಿದ್ದಾರೆ.ಅಲಿಸ್ಸಾ ಹೀಲಿ ಅವರ ಕ್ಯಾಚ್‌ಅನ್ನು ಶಫಾಲಿ ವರ್ಮಾ ಮೊದಲನೇ ಓವರ್‌ನಲ್ಲಿ ಬಿಟ್ಟಿದ್ದರು. ಇದು ಭಾರತದ ಪಾಲಿಗೆ ದುಬಾರಿಯಾಗಿತ್ತು.ಹೀಲಿ 75 ರನ್ ಚಚ್ಚಿದ್ದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್‌ಗಳಿಗೆ ನಾಲ್ಕು ವಿಕೆಟ್‌ನಷ್ಟಕ್ಕೆ 184 ರನ್ ಗಳಿಸಿತ್ತು.ಗುರಿ ಹಿಂಬಾಲಿಸುವ ವೇಳೆ ಶಫಾಲಿ ವರ್ಮಾ ಮೊದಲನೇ ಓವರ್‌ನ ಮೂರನೇ ಎಸೆತದಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚ್‌ನೀಡಿದ್ದರು. ಒಟ್ಟಾರೆ, ಶಫಾಲಿ ಟೂರ್ನಿಯ ಆರು ಪಂದ್ಯಗಳಿಂದ 163 ರನ್ ದಾಖಲಿಸಿದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ಶ್ರೇಯಾಂಕದಲ್ಲಿ ಶಫಾಲಿ ವರ್ಮಾ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು.ಈ ಬಗ್ಗೆ ಮಾತನಾಡಿರುವ ಸ್ಮೃತಿ ಮಾಂಧನ, "ನಾವಿಬ್ಬರು ಪ್ರಶಸ್ತಿ ಗೆಲ್ಲುವವರೆಗೂ ಜತೆಯಲ್ಲಿಯೇ ಇದ್ದೆವು. ಶಫಾಲಿ ಕಣ್ಣಲ್ಲಿ ನೀರು ತುಂಬಿತ್ತು.ಆ ವೇಳೆ ಟೂರ್ನಿಯಲ್ಲಿ ನಿನ್ನ ಪ್ರದರ್ಶನ ದೇಶಕ್ಕೆ ಹೆಮ್ಮೆ ತರಿಸುವಂತಿದೆ ಎಂದು ನಾನು ಆಕೆಗೆ ಹೇಳಿದ್ದೆ.ನಾನು 16ನೇ ವಯಸ್ಸಿನಲ್ಲಿ ಮೊದಲ ವಿಶ್ವಕಪ್‌ಆಡಿದಾಗ ಶಫಾಲಿ ಆಡಿದ ಶೇ. 20ರಷ್ಟು ಪ್ರದರ್ಶನವನ್ನೂ ತೋರಿರಲಿಲ್ಲ,'' ಎಂದು ಮಾಂಧನ ಹೇಳಿದ್ದಾರೆ.ಗುಂಪು ಹಂತದ ಎಲ್ಲ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ ತಂಡ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲು ಸಿದ್ದವಾಗಿತ್ತು. ಆದರೆ, ಮಳೆ ಬಂದ ಕಾರಣ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಗುಂಪು ಹಂತದ ಪ್ರದರ್ಶನದ ಆಧಾರದ ಮೇಲೆ ಭಾರತ ನೇರವಾಗಿ ಫೈನಲ್ ಪ್ರವೇಶ ಮಾಡಿತ್ತು.