ಪ್ರತಿ 3 ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಎಸ್‌.ಸಿ., ಎಸ್‌.ಟಿ. ಸಮುದಾಯದ ಕುಂದುಕೊರತೆಗಳ ಸಭೆ ಜರುಗಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

SC, ST community grievances meeting to be held at taluk level every 3 months: Deputy Commissioner Di

ಲೋಕದರ್ಶನ ವರದಿ 

ಪ್ರತಿ 3 ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಎಸ್‌.ಸಿ., ಎಸ್‌.ಟಿ. ಸಮುದಾಯದ ಕುಂದುಕೊರತೆಗಳ ಸಭೆ ಜರುಗಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು 

ಧಾರವಾಡ 21:  ಜಿಲ್ಲಾ ಮಟ್ಟದಲ್ಲಿ ಜರುಗುವ ರೀತಿಯಲ್ಲಿ ಎಲ್ಲ ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಕಂದಾಯ, ಪೊಲೀಸ್, ಸಮಾಜ ಕಲ್ಯಾಣ ಪಂಚಾಯತ ರಾಜ್ ಇಲಾಖೆಗಳು ಜಂಟಿಯಾಗಿ ಸಭೆ ಜರುಗಿಸಬೇಕೆಂದು ಸಮಿತಿಗಳ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶಿಸಿದರು. 

ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ 2024-25 ಸಾಲಿನ ಫೆಬ್ರವರಿ-2025 ರವರೆಗಿನ ವಿವಿಧ ಇಲಾಖೆಗಳ ಎಸ್‌.ಸಿ.ಎಸ್‌.ಪಿ ಮತ್ತು ಟಿ.ಎಸ್‌.ಪಿ ಕಾರ್ಯಕ್ರಮಗಳ ಪ್ರಗತಿ ಪರೀಶೀಲನಾ ಸಭೆ ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ 1ನೇ ತ್ರೈಮಾಸಿಕ ಸಭೆ ಹಾಗೂ 2025 ನೇ ಸಾಲಿನ 1ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. 

ಪ್ರತಿ ತಾಲೂಕಿನಲ್ಲಿ ತಹಶಿಲ್ದಾರ ಮತ್ತು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ಜರುಗಿಸಬೇಕು. ತಾಲೂಕು ಹಂತದಲ್ಲಿ ಸಮಸ್ಯೆಗಳನ್ನು ಪರೀಶೀಲಿಸಿ, ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. 

ಎಸ್‌.ಸಿ.ಎಸ್‌.ಪಿ ಹಾಗೂ ಟಿ.ಎಸ್‌.ಪಿ ಯೋಜನೆಗಳ ಪ್ರಗತಿ ಕುರಿತು ಪ್ರಮುಖ 24 ಇಲಾಖೆಗಳು ಫೆಬ್ರವರಿ 2025 ರವರೆಗೆ ಬಿಡುಗಡೆಯಾದ ಅನುದಾನಕ್ಕೆ ಶೇ.60.97 ರಷ್ಟು ಪ್ರಗತಿ ಆಗಿದೆ. ಕೆಲವು ಇಲಾಖೆಗಳಿಗೆ ಪ್ರಸಕ್ತ 2025 ರಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡಿ, ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. 

ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 1ನೇ ತರಗತಿ ದಾಖಲಾತಿ ಮಾಡಿಕೊಳ್ಳುವ ಪೂರ್ವದಲ್ಲಿ ಅಗತ್ಯ ದಾಖಲಾತಿಗಳನ್ನು ಪಡೆದು ಜಾತಿ ನಮೂದು ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಿದ್ದಾರೆ ಎಂದರು. 

ಪ್ರತಿ ತಾಲೂಕಿನಲ್ಲಿ ತಹಶಿಲ್ದಾರ ಮತ್ತು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ಜರುಗಿಸಬೇಕು. ತಾಲೂಕು ಹಂತದಲ್ಲಿ ಸಮಸ್ಯೆಗಳನ್ನು ಪರೀಶೀಲಿಸಿ, ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಬಂಧಿಸಿದಂತೆ ಡಿಸೆಂಬರ್ 2024 ರ ಪ್ರಾರಂಭದಲ್ಲಿ 197 ಬಾಕಿ ಪ್ರಕರಣಗಳಿದ್ದವು. 2024 ರ ಡಿಸೆಂಬರ್‌ದಲ್ಲಿ 2 ಮತ್ತು  2025ರ ಜನವರಿಯಲ್ಲಿ 5 ಪ್ರಕರಣ ಸೇರಿ ಒಟ್ಟು 204 ಪ್ರಕರಣಗಳಿದ್ದು, ಇವುಗಳಲ್ಲಿ 6 ಪ್ರಕರಣಗಳು ವಿಲೇವಾರಿ ಆಗಿವೆ. 198 ಬಾಕಿ ಉಳಿದಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗದಂತೆ ನ್ಯಾಯಾಲಯ ಪ್ರಕರಣಗಳ ಬೇಗ ಇತ್ಯರ್ಥಗೊಳಿಸುವಲ್ಲಿ ಸರಕಾರಿ ವಕೀಲರು, ಪೊಲೀಸ್ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ನ್ಯಾಯ ಸೀಗುವಂತೆ ಸರಿಯಾದ ಸಾಕ್ಷ್ಯ, ವಾದ ಮಂಡನೆ ಆಗಿ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಪೌರಕಾರ್ಮಿಕರ ಕೆವೈಸಿ ಅಪಡೆಟ್ ಆಗದೆ ಇರುವ 56 ಪ್ರಕರಣಗಳಲ್ಲಿ ಬೇಗ ಕ್ರಮವಹಿಸಬೇಕು. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ವ್ಯವಸ್ಥೆ ಮಾಡುವಲ್ಲಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಹೊಸ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಅಂತಿಮಗೊಳಿಸಿ, ಉಪಹಾರ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಅನುಪಾಲನಾ ವರದಿ ಸಲ್ಲಿಸಿದ್ದಾರೆ. ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ, ಸಂಕಷ್ಟ ಭತ್ಯೆ ನೀಡುವ ಕುರಿತು ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. 

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಗಾಳಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ ಇದ್ದರು. 

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ತಹಶಿಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಸರಕಾರಿ ವಕೀಲರು, ಜಿಲ್ಲಾ ಸಫಾಯಿ ಕರ್ಮಚಾರಿಗಳ ಸಮಿತಿ ಸದಸ್ಯರು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.