ಲಂಡನ್, ಮಾ12 ,ಲಂಡನ್ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.ಬುಧವಾರ ತಡರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಸೈನಾ 11-21, 8-21 ನೇರ ಗೇಮ್ ಗಳಿಂದ ವಿಶ್ವದ ಮೂರನೇ ರಾಂಕಿನ ಆಕಾನೆ ಯಮಗುಚಿ ವಿರುದ್ಧ ಪರಾಭವಗೊಂಡಿದ್ದಾರೆ. ಇದು ಜಪಾನ್ ಆಟಗಾರ್ತಿ ಯಮಗುಚಿ ವಿರುದ್ಧ ಸೈನಾಗೆ ಎದುರಾದ ಸತತ ಮೂರನೇ ಸೋಲಾಗಿದೆ. ಇದಲ್ಲದೆ ಸೈನಾ ನೆಹ್ವಾಲ್ ಈ ವರ್ಷ ಆಡಿದ ಐದು ಟೂರ್ನಿಗಳ ಪೈಕಿ ಮೂರರಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಂತಾಗಿದೆ.ಮುಂಬರುವ ಟೋಕಿಯೊ ಒಲಿಂಪಿಕ್ಸ್ ಏಪ್ರಿಲ್ 28ರ ಒಳಗೆ ಅರ್ಹತೆ ಗಳಿಸಬೇಕಾದ ಒತ್ತಡದಲ್ಲಿರುವ ಸೈನಾ ಈ ಸೋಲಿನೊಂದಿಗೆ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ ಭಾರತದಲ್ಲಿ ನಡೆಯಲಿರುವ ಇಂಡಿಯಾ ಓಪನ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಸೈನಾ ಅವರ ಒಲಿಂಪಿಕ್ಸ್ ಅರ್ಹತೆ ಆಸೆ ಈಡೇರಲಿದೆ.ಒಲಿಂಪಿಕ್ಸ್ ಅರ್ಹತೆ ಹಾದಿಯಲ್ಲಿರುವ ಕಿಡಂಬಿ ಶ್ರೀಕಾಂತ್ ಸಹ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. ಆದರೆ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧೂ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ.
**************
ಸಚಿನ್ ದಾಖಲೆ ಮುರಿಯುವ ಹೊಸ್ತಿಲಲ್ಲಿ ಕೊಹ್ಲಿ
ಧರ್ಮಶಾಲಾ, ಮಾ12 (ಯುಎನ್ಐ)ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ. ಹೌದು. ಧರ್ಮಶಾಲಾದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ವೇಳೆ ಕೊಹ್ಲಿ 133 ರನ್ ಗಳಿಸಿದರೆ ಅತಿ ವೇಗದಲ್ಲಿ 12 ಸಾವಿರ ರನ್ ಪೂರೈಸಿದ ಸಚಿನ್ ಅವರ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.ಸದ್ಯ ಕೊಹ್ಲಿ 239 ಇನಿಂಗ್ಸ್ ಗಳಲ್ಲಿ 11 ಸಾವಿರದ 867 ರನ್ ಗಳಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ 300 ಇನಿಂಗ್ಸ್ ಗಳಲ್ಲಿ 12 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಒಂದು ವೇಳೆ ಕೊಹ್ಲಿ ದಾಖಲೆ ಮುರಿದ್ದಲ್ಲಿ ಅತಿ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಲಿದ್ದಾರೆ.ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 314 ಇನಿಂಗ್ಸ್ ಗಳಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ ಎರಡನೇ ಆಟಗಾರ ಎನಿಸಿದರೆ, ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ 336 ಇನಿಂಗ್ಸ್ ಗಳಲ್ಲಿ 12 ಸಾವಿರ ರ್ ಗಳಿಸಿದ್ದಾರೆ. ************
ರಸ್ತೆ ಸುರಕ್ಷತಾ ಕ್ರಿಕೆಟ್ ಸೀರೀಸ್: ಪುಣೆ ಪಂದ್ಯಗಳು ಮುಂಬೈಗೆ ಸ್ಥಳಾಂತರ
ಮುಂಬೈ, ಮಾ12,ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಪುಣೆಯಲ್ಲಿ ನಡೆಯಬೇಕಿದ್ದ ರಸ್ತೆ ಸುರಕ್ಷತೆಯ ಭಾಗವಾದ ವಿಶ್ವ ಟಿ20 ಕ್ರಿಕೆಟ್ ಸರಣಿಯ ಉಳಿದ ಪಂದ್ಯಗಳನ್ನು ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದ್ದು, ಪ್ರೇಕ್ಷಕರನ್ನು ಹೊರಗಿಟ್ಟು ನಡೆಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.ಮಾರ್ಚ್ 14ರಿಂದ 20ರವರೆಗೆ ಪುಣೆಯಲ್ಲಿ ನಿಗದಿಯಾಗಿದ್ದ ಪಂದ್ಯಗಳನ್ನು ಮುಂಬೈಗೆ ಸ್ಥಳಾಂತರಿಸಿದ್ದು, ಫೈನಲ್ ಪಂದ್ಯ ಸೇರಿದಂತೆ ಉಳಿದೆಲ್ಲ ಪಂದ್ಯಗಳನ್ನು ಪ್ರೇಕ್ಷಕರನ್ನು ಹೊರಗಿಟ್ಟು ನಡೆಸಲಾಗುವುದು ಎಂದು ಆಯೋಜಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಆಟಗಾರರು, ಸಿಬ್ಬಂದಿ ಮತ್ತು ಪ್ರೇಕ್ಷಕರ, ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಮಾರ್ಚ್ 22ರಂದು ಫೈನಲ್ ಪಂದ್ಯ ನಡೆಯಲಿದೆ. ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡ 6 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವನ್ನು ಸೋಲಿಸಿದೆ