ಸಹಕಾರಿ ಫ್ಯಾಕ್ಸ್‌ನಿಂದ ಗ್ರಾಮೀಣ ಅಭಿವೃದ್ಧಿ: ಸಚಿವ ಶಿವಾನಂದ

Rural development through cooperative fax: Minister Shivananda

ಲೋಕದರ್ಶನ ವರದಿ 

ಸಹಕಾರಿ ಫ್ಯಾಕ್ಸ್‌ನಿಂದ ಗ್ರಾಮೀಣ ಅಭಿವೃದ್ಧಿ: ಸಚಿವ ಶಿವಾನಂದ 

ವಿಜಯಪುರ 12: ಗ್ರಾಮೀಣ ಭಾಗದಲ್ಲಿ ರೈತರ ಸಮಗ್ರ ಅಭಿವೃದ್ಧಿಯಲ್ಲಿ ಸಹಕಾರಿ ಫ್ಯಾಕ್ಸುಗಳು ಅತ್ಯುತ್ತಮ ಸೇವೆ ನೀಡುತ್ತಿವೆ. ಆದರೂ ಸಮನ್ವಯ, ಸಾಮರಸ್ಯ ಹಾಗೂ ಪ್ರಾಮಾಣಿಕತೆಯಿಂದ ಇನ್ನೂ ಪರಿಣಾಮಕಾರಿ ಸೇವೆ ನೀಡುವ ಅಗತ್ಯವಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜವಳಿ, ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ, ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು. 

 

ವಿಜಯಪುರ ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘಗಳ ಆಡಳಿತ ಮಂಡಳಿಗೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷರು, ಪದಾಧಿಕಾರಿಗಳಿಗೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಹಮ್ಮಿಕೊಂಡಿದ್ದ ಸಹಕಾರ ಸಂಘಗಳ ಸಮಪರ್ಕಕ ನಿರ್ವಹಣೆ ಕುರಿತು ಒಂದು ದಿನದ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಮಾಣಿಕತೆ, ಬದ್ಧತೆ ಹಾಗೂ ಸಹಕಾರ ತತ್ವದ ಸೇವೆಯೇ ಸಹಕಾರಿ ರಂಗದ ಮೂಲ ತತ್ವ ಹಾಗೂ ಧ್ಯೇಯ. ಹೀಗಾಗಿ ಸಹಕಾರಿ ರಂಗದ ಆಡಳಿತ ಚುಕ್ಕಾಣಿ ಹಿಡಿದಿರುವ ಸಹಕಾರಿಗಳು ಸೇವಾ ಬದ್ಧತೆ, ಸಹಕಾರಿ ತತ್ವಪರತೆಯಿಂದ ಆಡಳಿತ ನಡೆಸಿದಲ್ಲಿ ಕೃಷಿ ಆಧಾರಿತ ಗ್ರಾಮೀಣ ರೈತ-ಜನರ ಬದುಕನ್ನು ಹಸನಾಗಿಸಲು ಸಾಧ್ಯವಿದೆ ಎಂದರು. 

ಗ್ರಾಮೀಣ ಭಾಗದಲ್ಲಿ ರೈತರಿಗೆ ಬೀಜ, ಗೊಬ್ಬರ, ಪಡಿತರ, ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ, ಕೃಷಿಯೇತರ ಸಾಲ ವಿತರಣೆಯಲ್ಲಿ ಗ್ರಾಮೀಣ ಸಹಕಾರಿ ಸಂಘಗಳ ಪಾತ್ರ ಅತ್ಯಂಥ ಮಹತ್ವದ್ದಾಗಿದೆ. ಪ್ರಸಕ್ತ ಸಂದರ್ಭದಲ್ಲಿ ಅತ್ಯುತ್ತಮ ಸೇವೆಯ ಮೂಲಕ ಗ್ರಾಮೀಣ ಅಭಿವೃದ್ಧಿಯಲ್ಲಿ ಫ್ಯಾಕ್ಸ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದರು. 


2024-25ನೇ ಆರ್ಥಿಕ ವರ್ಷದಲ್ಲಿ ಸದಸ್ಯರ ಠೇವಣಿ 1039 ಕೋಟಿ ರೂ. ಸಂಗ್ರಹದೊಂದಿಗೆ ದಾಖಲಾರ್ಹ ಸಾಧನೆ ಮಾಡಿದೆ. 2.94 ಲಕ್ಷ ಸದಸ್ಯರಿಗೆ 2360 ಕೋಟಿ ರೂ. ಸಾಲ ನೀಡಿದ್ದು, ಫ್ಯಾಕ್ಸ್‌ಗಳು 3321 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿವೆ. 245 ಸಹಕಾರಿ ಸಂಘಗಳು ಲಾಭದಲ್ಲಿವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. 

 

ಇಂಥ ಪ್ರಗತಿ, ಸಾಧನೆಯ ಮಧ್ಯೆಯೂ ಜಿಲ್ಲೆಯಲ್ಲಿ 27 ಸಂಘಗಳು ಹಾನಿಯಲ್ಲಿದ್ದು, ಕೆಲವೆಡೆ ಆರ್ಥಿಕ ಅಹಿತಕರ ಘಟನೆಗಳು ವರದಿಯಾಗಿವೆ. ಇಂಥ ಸಂಘಗಳನ್ನು ಆರ್ಥಿಕ ಪ್ರಗತಿಯತ್ತ ತರುವಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿ-ಸಿಬ್ಬಂದಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕಿದೆ. ಪಾರದರ್ಶಕ ಆಡಳಿತದಿಂದ ಉತ್ತಮ ಸೇವೆ ಸಲ್ಲಿಸಿದಲ್ಲಿ, ನಷ್ಟದಲ್ಲಿರುವ ಫ್ಯಾಕ್ಸ್‌ಗಳನ್ನು ಆರ್ಥಿಕ ಉನ್ನತಿಗೇರಿಸಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು. 


ಸಹಕಾರಿ ಸಂಘಗಳ ಸದೃಢತೆಯಲ್ಲಿ ಕೃಷಿರಂಗ, ರೈತೋದ್ಧಾರ ಹಾಗೂ ಗ್ರಾಮೀಣ ಅಭಿವೃದ್ಧಿ ಅಡಗಿದೆ. ಆದ್ದರಿಂದ ಗ್ರಾಮೀಣ ಪರಿಸರದಲ್ಲಿ ಸಹಕಾರಿ ರಂಗದ ಚುಕ್ಕಾಣಿ ಹಿಡಿದಿರುವ ಪದಾಧಿಕಾರಿಗಳು, ಅಧಿಕಾರಿ-ಸಿಬ್ಬಂದಿ ಸಮನ್ವಯದಿಂದ ಗ್ರಾಮೀಣ ಜನರ ಸೇವೆಗೆ ಪ್ರಾಮಾಣಿತೆ, ಬದ್ಧತೆಯಿಂದ ಸೇವೆ ಸಲ್ಲಿಸುವಂತೆ ಮಾರ್ಗದರ್ಶನ ಮಾಡಿದರು. 


ಸಹಕಾರಿ ಸಂಘಗಳ ಪದಾಧಿಕಾರಿಗಳ ಅಧಿಕಾರ-ಕರ್ತವ್ಯ ಹಾಗೂ ಸಂಗಗಳ ಸಮರ​‍್ಕ ನಿರ್ವಹಣೆ ಕುರಿತು ಮಾತನಾಡಿದ ಸಹಕಾರಿ ಸಂಘಗಳ ನಿವೃತ್ತ ಅಪರ ನಿಬಂಧಕರಾದ ಎಂ.ಜಿ.ಪಾಟೀಲ, ನೂತನ ಸಹಕಾರಿ ಆಡಳಿತಗಾರರು ಅನುಸರಿಸಬೇಕಿರುವ ನೀತಿ, ನಿಯಮ, ಕಾನೂನುಗಳ ಕುರಿತು ಮಾಹಿತಿ ನೀಡಿದರು. 


ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶೇಖರ ಅ. ದಳವಾಯಿ, ಹಣಮಂತ್ರಾಯಗೌಡ ಆರ್‌. ಪಾಟೀಲ, ಕಲ್ಲನಗೌಡ ಬ. ಪಾಟೀಲ, ಸುರೇಶಗೌಡ ಐ. ಬಿರಾದಾರ, ಅರವಿಂದ ಅ. ಪೂಜಾರಿ, ಸಹಕಾರಿ ಸಂಘಗಳ ಇಚಿಡಿ ಉಪ ವಿಭಾಗದ ಸಹಾಯಕ ನಿಬಂಧಕರಾದ ಕೆ.ಎಚ್‌.ವಡ್ಡರ, ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಕರು, ನೋಡಲ್ ಅಧಿಕಾರಿಗಳು, ಕ್ಷೇತ್ರಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎ.ಢವಳಗಿ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ ಸ್ವಾಗತಿಸಿದರೆ, ಉಪ ಪ್ರಧಾನ ವ್ಯವಸ್ಥಾಪಕ ಜೆ.ಬಿ.ಪಾಟೀಲ ವಂದಿಸಿದರು.