ಬೆಂಗಳೂರು, ಆಗಸ್ಟ್ 25 ರಾಜ್ಯ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿರಲಿಲ್ಲ. ಗುಮಾಸ್ತನ ಕೆಲಸ ಮಾಡುತ್ತಿದ್ದೆ. ಸಿದ್ದರಾಮಯ್ಯ ನನ್ನ ಮೊದಲ ಶತ್ರುವಾಗಿದ್ದರು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೆಬ್ ಸೈಟ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುಮಾರಸ್ವಾಮಿ ಈ ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡುವೆ ಆರೋಪ- ಪ್ರತ್ಯಾರೋಪ ನ ನಡೆಯುತ್ತಿದೆ. ಈಗ ಎಚ್. ಡಿ. ಕುಮಾರಸ್ವಾಮಿ ಸೇರಿಕೊಂಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದು ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಆಪ್ತ ಶಾಸಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದರು. ಶಾಸಕರ ರಾಜೀನಾಮೆಗೂ ಸಿದ್ದರಾಮಯ್ಯ ನೇರ ಕಾರಣ" ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. "ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಮುಂದುವರೆಯಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವಾಗಿತ್ತು. ಆದರೆ, ಸಿದ್ದರಾಮಯ್ಯಗೆ ಅದು ಇಷ್ಟವಿರಲಿಲ್ಲ. ಮುಖ್ಯಮಂತ್ರಿ ಆಗಿ ನಾನು ಕೈಗೊಂಡ ಕೆಲವು ತೀರ್ಮಾನಗಳನ್ನು ಸಹಿಸಿಕೊಳ್ಳದೆ ಸರ್ಕಾರದ ಪತನಕ್ಕೆ ನಿರಂತರ ಪ್ರಯತ್ನ ಮಾಡಿದ್ದರು" ಎಂದು ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು. ರಾಜ್ಯ ಬಿಜೆಪಿ ಸರ್ಕಾರ ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿರುವುದರಲ್ಲಿ ಸಿದ್ದರಾಮಯ್ಯ ಕರಾಮತ್ತು ಕಾರಣ. ಅತೃಪ್ತ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ದರಾಗಿದ್ದರೂ ಅದಕ್ಕೆ ಅವಕಾಶ ನೀಡಲಿಲ್ಲ. ನಾನು ಮುಖ್ಯಮಂತ್ರಿ ಇರುವುದನ್ನು ಸಹಿಸದ ಸಿದ್ದರಾಮಯ್ಯ ಸರ್ಕಾರ ಪತನದ ರೂವಾರಿಯಾದರು" ಎಂದು ಕುಮಾರಸ್ವಾಮಿ ದೂರಿದರು. ನಾನು ಕೈಗೊಂಡ ತೀರ್ಮಾನದ ವಿರುದ್ದ ತಮ್ಮ ಬೆಂಬಲಿಗರನ್ನು ಮೂಲಕ ಬಂಡಾಯಕ್ಕೆ ನಾಂದಿ ಹಾಡಿದ್ದರು ಎಂದು ದೂರಿದ್ದಾರೆ.