ನವದೆಹಲಿ, ಫೆ 24,ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯ ಆರಂಭವಾಗಲು ಇನ್ನೂ ಹೆಚ್ಚು-ಕಡಿಮೆ ಒಂದು ತಿಂಗಳು ಅವಧಿ ಬಾಕಿ ಇದೆ. ಈಗಾಗಲೇ ಸಕಲ ಸಿದ್ಧತೆಯಲ್ಲಿ ತೊಡಗಿರುವ ತವರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 21 ರಿಂದ ಅಭ್ಯಾಸ ಶುರು ಮಾಡಲಿದೆ ಎಂದು ಆರ್ಸಿಬಿ ನಿರ್ದೇಶಕ ಮೈಕ್ ಹೆಸ್ಸಾನ್ ತಿಳಿಸಿದ್ದಾರೆ.ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಮೈಕ್ ಹೆಸ್ಸಾನ್,” ನಮ್ಮ ಪೂರ್ಣ ಪ್ರಮಾಣದ ತಂಡವು ಮಾರ್ಚ್ 21 ರಿಂದ ಅಧಿಕೃತವಾಗಿ ಅಭ್ಯಾಸ ಆರಂಭಿಸಲಿದೆ. ಬೆಂಗಳೂರು ತಂಡದ ಅಂತಾರಾಷ್ಟ್ರೀಯ ಹಾಗೂ ದೇಶೀಯ ಆಟಗಾರರೆಲ್ಲರು ಆಯಾ ಜವಾಬ್ದಾರಿಗಳೆಲ್ಲವನ್ನೂ ಅಂದೇ ಮುಗಿಸಿಕೊಳ್ಳಲ್ಲಿದ್ದಾರೆ. ವೈಯಕ್ತಿಕ ಕಾರ್ಯಗಾರ ಈಗಾಗಲೇ ಆರಂಭವಾಗಿದೆ,’’ ಎಂದು ಹೇಳಿದ್ದಾರೆ.
ಮಾರ್ಚ್ 29 ರಂದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಮಾರ್ಚ್ 31 ರಂದು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು 13ನೇ ಆವೃತ್ತಿಯ ತಮ್ಮ ಮೊದಲನೇ ಕಾದಾಟದಲ್ಲಿ ಮುಖಾಮುಖಿಯಾಗಲಿವೆ.2020ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿಆರ್ಸಿಬಿ ತಂಡ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್, ಡೇಲ್ ಸ್ಟೇನ್, ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್, ಕೇನ್ ರಿಚರ್ಡ್ ಸನ್ ಹಾಗೂ ಜೋಶುಹಾ ಫಿಲಿಫ್, ಶ್ರೀಲಂಕಾದ ಇಸುರು ಉದನ ಮತ್ತು ಶಹಬಾಜ್ ನದೀಮ್ ಅವರನ್ನು ಖರೀದಿ ಮಾಡಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2017 ಮತ್ತು 2019ರ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಆದರೆ, 2018ರ ಆವೃತ್ತಿಯಲ್ಲಿ ಆರನೇ ಸ್ಥಾನ ಪಡೆದಿತ್ತು. 2016ರ ಆವೃತ್ತಿಯಲ್ಲಿ ಫೈನಲ್ ಹಣಾಹಣಿಯಲ್ಲಿ ಸೋತು ರನ್ನರ್ ಅಪ್ ಆಗಿತ್ತು.