ನವದೆಹಲಿ, ಅ 15: ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ವೃತ್ತಿ ಜೀವನದ 700 ಗೋಲುಗಳನ್ನು ಸೋಮವಾರ ಉಕ್ರೈನ್ ವಿರುದ್ಧದ ಯುರೋ-2020ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೂರೈಸಿದರು.
ಸೋಮವಾರ ತಡರಾತ್ರಿ ನಡೆದಿದ್ದ ಪಂದ್ಯದಲ್ಲಿ 34ರ ಪ್ರಾಯದ ರೊನಾಲ್ಡೊ ಅವರು ಪೆನಾಲ್ಟಿಯಲ್ಲಿ ಸಿಡಿಸಿದ ಗೋಲಿನ ನೆರವಿನಿದ ಪೋರ್ಚುಗಲ್ ತಂಡ 2-1 ಅಂತರದಲ್ಲಿ ಉಕ್ರೈನ್ ವಿರುದ್ಧ ಗೆಲುವಿನ ನಗೆ ಬೀರಿತು. 700 ಗೋಲುಗಳನ್ನು ಪೂರೈಸಲು ರೊನಾಲ್ಡೊ ಒಟ್ಟು 973 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
ಇರಾನ್ ನ ಅಲಿ ದಾಯಿ ಅವರು 109 ಅಂತಾರಾಷ್ಟ್ರೀಯ ಗೋಲುಗಳನ್ನು ಸಿಡಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್ ಸ್ಟಾರ್ ಸ್ಟ್ರೈಕರ್ ಎರಡನೇ ಸ್ಥಾನದಲ್ಲಿದ್ದಾರೆ. 700 ಗೋಲು ಸಿಡಿಸುತ್ತಿದ್ದಂತೆ ರೊನಾಲ್ಡೊ 700 ಗೋಲು ಗಳಿಸಿರುವವರ ಎಲೈಟ್ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು.
805 ಗಳಿಸಿರುವ ಜೆಕ್ ಆಸ್ಟ್ರೀಯಾದ ಜೋಸೆಫ್ ಬಿಕಾನಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಬ್ರೆಜಿಲ್ನ ರೊಮಾರಿಯೊ (772), ಮೂರನೇ ಸ್ಥಾನದಲ್ಲಿ ಪೀಲೆ (767) ಇದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಫೆರೆನ್ಸ್ ಪುಕಾಸ್ (746) ಹಾಗೂ ಜರ್ಮನಿಯ ಮಾಜಿ ಮುಂಚೂಣಿ ಆಟಗಾರ ಗೆರ್ಡ್ ಮುಲ್ಲರ್(735) ಇದ್ದಾರೆ.