ಮತ್ತೊಂದು ದಾಖಲೆ ಬರೆದ ರೋಹಿತ್ ಶರ್ಮಾ

ಇಂದೋರ್, ನ 14 :      ಭಾರತ ಏಕದಿನ ತಂಡದ ಉಪನಾಯಕ ಹಾಗೂ ಬಲಗೈ ಆರಂಭಿಕ ಬ್ಯಾಟ್ಸ್ಮನ್ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಂದು   ದಾಖಲೆಯನ್ನು ಬರೆದಿದ್ದಾರೆ.

 ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಂದೋರ್ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ರೋಹಿತ್ ಶರ್ಮಾ, ಭಾರತದ ಪರ 350 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಗೌರವಕ್ಕೆ ಭಾಜನವಾಗಿದ್ದಾರೆ.

2007ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿರಿಸಿರುವ ರೋಹಿತ್, ಕಳೆದ 12 ವರ್ಷಗಳ ವೃತ್ತಿ ಜೀವನದಲ್ಲಿ ಭಾರತದ ಅತಿ ಮುಖ್ಯ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ.

ಆದರೆ ಏಕದಿನ ಹಾಗೂ ಟ್ವೆಂಟಿ-20ಗಳಿಗೆ ಹೋಲಿಸಿದಾಗ ಟೆಸ್ಟ್ ಕ್ರಿಕೆಟ್ನಲ್ಲಿ ಅಷ್ಟೊಂದು ಯಶ ಸಾಧಿಸಿರಲಿಲ್ಲ. ಅಲ್ಲದೆ ಕೇವಲ 31 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆದರೆ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅದೃಷ್ಟವೇ ಬದಲಾಗಿತ್ತು.

ಟೆಸ್ಟ್ ಆರಂಭಿಕನಾದ ಚೊಚ್ಚಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದರು. ಅಷ್ಟೇ ಅಲ್ಲ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಶತಕ ಹಾಗೂ ದ್ವಿಶತಕದ ಸಾಧನೆ ಮೆರೆದಿದ್ದರು.

ಅತಿ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಮಾಜಿ ಆಟಗಾರ  ಸಚಿನ್ ತೆಂಡೂಲ್ಕರ್ (664) ಹೊಂದಿದ್ದಾರೆ. ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಹಾಗೂ ಕುಮಾರ ಸಂಗಕ್ಕರ ಅನುಕ್ರಮವಾಗಿ 652 ಹಾಗೂ 594 ಪಂದ್ಯಗಳನ್ನಾಡಿದ್ದಾರೆ.