ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿದ ರೋಹಿತ್, ಅಶ್ವಿನ್

ರಾಂಚಿ, ಅ.22: ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶಮರ್ಾ ಹಾಗೂ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.  

ರೋಹಿತ್ ಶರ್ಮಾ  ತಮ್ಮ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕೆ ಇಳಿದು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಒಟ್ಟು ಸರಣಿಯಲ್ಲಿ ಹಿಟ್ ಮ್ಯಾನ್ 529 ರನ್ ಸಿಡಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಟೆಸ್ಟ್ ನಲ್ಲಿ 176 ಹಾಗೂ 127 ರನ್ ಸಿಡಿಸಿದ್ದರು. ಅಲ್ಲದೆ ಮೂರನೇ ಟೆಸ್ಟ್ ನಲ್ಲಿ 212 ರನ್ ಬಾರಿಸಿದ್ದರು. ಮೂರನೇ ಟೆಸ್ಟ್ ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದಕ್ಕೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳು ಲಭಿಸಿವೆ.  

ರೋಹಿತ್ ಶರ್ಮಾ  ಈ ಸರಣಿಯಲ್ಲಿ 132.25ರ ಸರಾಸರಿಯಲ್ಲಿ ರನ್ ಸಿಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ 158.50 ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ. ವಿರಾಟ್ ಅವರು ಪುಣೆ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿದ್ದರು. ಮೊದಲ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿರುವ ಮಯಾಂಕ್ ಅಗರ್ ವಾಲ್ ಅವರೊಂದಿಗೆ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. 

ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ 232 ರನ್ ಬಾರಿಸುವುದರೊಂದಿಗೆ ಗಮನ ಸೆಳೆದಿದ್ದಾರೆ. ಅಲ್ಲದೆ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಜಿಂಕ್ಯ ರಹಾನೆ 216 ರನ್ ಸಿಡಿಸಿದರೆ, ರವೀಂದ್ರ ಜಡೇಜಾ 212 ರನ್ ಬಾರಿಸಿದ್ದು, ಕ್ರಮವಾಗಿ ಏಳು ಹಾಗೂ ಎಂಟನೇ ಸ್ಥಾನದಲ್ಲಿದ್ದಾರೆ.  

ಬೌಲಿಂಗ್ ನಲ್ಲಿ ರವಿಚಂದ್ರನ್ ಅಶ್ವಿನ್ ಅವರು 25.26ರ ಸರಾಸರಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಂಡಿದ್ದಾರೆ. ಇವರು 15 ವಿಕೆಟ್ ಪಡೆದು ಮಿಂಚಿದ್ದಾರೆ. ಉಮೇಶ್ ಯಾದವ್ 11 ಹಾಗೂ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 13 ವಿಕೆಟ್ ಉರುಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಕಗಿಸೊ ರಬಾಡ ಆರು ವಿಕೆಟ್ ಪಡೆದಿದ್ದಾರೆ.