ರೋಜರ್ಸ್ ಕಪ್: ಕ್ವಾರ್ಟರ್ ಫೈನಲ್ ತಲುಪಿದ ನಡಾಲ್, ಸೆರೇನಾ

ಟೊರೊಂಟೊ/ಮಾಂಟ್ರಿಯಲ್, ಆ 9   ವಿಶ್ವ ಶ್ರೇಷ್ಠ ಸೆರೇನಾ ವಿಲಿಯಮ್ಸ್ ಹಾಗೂ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ರೋಜರ್ಸ್ ಕಪ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 

ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಅಮೆರಿಕ ಆಟಗಾರ್ತಿ ಸೆರೇನಾ ವಿಲಿಯಮ್ಸ್ ಅವರು ರಷ್ಯಾದ ಎಕಟರೀನಾ ಅಲೆಕ್ಸಾಂಡ್ರೊವಾ ಅವರ ವಿರುದ್ಧ 7-5, 6-4 ಅಂತರದಲ್ಲಿ ನೇರ ಸೆಟ್ಗಳಲ್ಲಿ ಗೆದ್ದು ಅಂತಿಮ ಎಂಟರ ಹಂತಕ್ಕೆ ಲಗ್ಗೆ ಇಟ್ಟರು. 

ಕಳೆದ ವಿಂಬಲ್ಡಲ್ ಫೈನಲ್ ಸೋಲು ಅನುಭವಿಸಿದ್ದ ಬಳಿಕ ಇದೇ ಮೊದಲ ಟೂರ್ನಿ ಆಡುತ್ತಿರುವ ವಿಶ್ವದ ಮಾಜಿ ಅಗ್ರ ಶ್ರೇಯಾಂಕದ ಆಟಗಾರ್ತಿ ಬುಧವಾರ ಬೆಲ್ಜಿಯಂನ ಎಲೈಸ್ ಮೆರ್ಟ್ನ್ಸ್ ವಿರುದ್ಧ 6-3, 6-3 ನೇರ ಸೆಟ್ಗಳಿಂದ ವಿಜಯದ ಪತಾಕೆ ಹಾರಿದ್ದರು. 37ರ ಪ್ರಾಯದ ವಿಲಿಯಮ್ ಮೂರು ಬಾರಿ ಪ್ರಸ್ತುತ ಟೂರ್ನಿ ಗೆದ್ದಿದ್ದಾರೆ.  

ಸೆರೇನಾ ವಿಲಿಯಮ್ಸ್ ಅವರು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಜಪಾನ್ನ ನವೋಮಿ ಓಸಾಕ ಅವರ ವಿರುದ್ಧ ಸೆಣಸಲಿದ್ದಾರೆ. ಓಸಾಕ ಅವರು 16ರ ಹಂತದಲ್ಲಿ ಇಗಾ ಸ್ವಿಯಾಟೆಕ್ ಅವರ ವಿರುದ್ಧ 7-6 (7-4), 6-4 ಅಂತರದಲ್ಲಿ ಜಯ ಸಾಧಿಸಿದ್ದರು. 

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಫೆಲ್ ನಡಾಲ್ ಅವರು ಅರ್ಜೆಂಟೀನಾದ ಗ್ವಿಡೊ ಪೆಲ್ಲಾ ಅವರ ವಿರುದ್ಧ 6-3, 6-4 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದ್ದಾರೆ.  

33ರ ಪ್ರಾಯದ ನಡಾಲ್ ಅವರು ಕಳೆದ ಬಾರಿ ಇದೇ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಸ್ಟಿಫಾನೋಸ್ ಸಿಟ್ಸಿಪಸ್ ಅವರ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ನಡಾಲ್ ಅವರು ಮುಂದಿನ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಇಟಲಿಯ ಫ್ಯಾಬಿಯೊ ಫೊಗ್ನೊನಿ ಅವರ ವಿರುದ್ಧ ಸೆಣಸಲಿದ್ದಾರೆ. ಫೊಗ್ನೊನಿ ಅವರು 16 ಹಂತದ ಪಂದ್ಯದಲ್ಲಿ ಫ್ರಾನ್ಸ್ನ ಆಡ್ರಿಯನ್ ಮನ್ನಾರಿನೋ ವಿರುದ್ಧ 6-2, 7-5 ಅಂತರದಲ್ಲಿ ಗೆದ್ದಿದ್ದರು.