ಬೀಳಗಿ 06: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕು. ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಗುರುವಾರ ಬೀಳಗಿ ಕ್ರಾಸ್‌ನಲ್ಲಿ ಭಾರತೀಯ ಕಿಸಾನ್ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳ ಪಧಾದಿಕಾರಿಗಳು ಹಾಗೂ ಸದಸ್ಯರು ಜಂಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನಂತರ ಯುಕೆಪಿ ಮೂರನೇ ಹಂತದ ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಎಲ್ಲಾ ರೈತರು ಗುರುವಾರ ಯುಕೆಪಿ ಪುನರ್ವಸತಿ, ಪುನರ್ ನಿರ್ಮಾಣ ಕಛೇರಿಗೆ ಮುತ್ತಿಗೆ ಹಾಕಿ ಬಾಗಿಲನ್ನು ಕೀಲಿ ಹಾಕಿ ಬಂದ್ ಮಾಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಮಾತನಾಡಿ ಆಲಮಟ್ಟಿ ಜಲಾಶಯ ನಿರ್ಮಿಸಿ ಅರವತ್ತು ವರ್ಷಗಳಾಗಿವೆ. ಇಂದಿಗೂ ಯೋಜನೆ ಪೂರ್ಣಗೊಂಡಿಲ್ಲ. ಈ ಬಾರಿ ನಮಗೆ ನ್ಯಾಯ ಸಿಗದೇ ಹೋದರೆ ಡಿ. 11 ರಂದು ನಾವು ತಂದೆ ತಾಯಿ, ಹೆಂಡತಿ ಮಕ್ಕಳ ಸಮೇತರಾಗಿ ನಾವು ಸಾಕಿದ ದನಕರುಗಳೊಂದಿಗೆ ಗದ್ದನಕೇರಿ ಕ್ರಾಸ್‌ನಲ್ಲಿ ನಡೆಯು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವನಗೌಡ ಪಾಟೀಲ ಮಾತನಾಡಿ ಯುಕೆಪಿ ಪುನರ್‌ವಸತಿ ಹಾಗೂ ಪುನರ್ ನಿರ್ಮಾನ ಕಛೇರಿಯ ಅಧಿಕಾರಿಗಳು ಕಛೇರಿಗೆ ಆಗಮಿಸುವ ರೈತರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ನಿಮ್ಮ ದುರ್ವವರ್ತನೆ ಮುಂದುವರೆದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ಬಾಕ್ಸ್ : ಕೆಬಿಜೆಎನೆಲ್ ಸಹಾಯಕ ಕಾರ್ಯನಿರ್ವಾಹಕ ಇಂಜೀನೀಯರ್ ಕಛೇರಿಯಲ್ಲಿ 5 ಜನ ಖಾಯಂ ನೌಕರರಿದ್ದು ಗುರುವಾರ ಬೆಳಗ್ಗೆ 12 ಗಂಟೆಗೆ ಪ್ರಥಮ ದರ್ಜೆ ಸಹಾಯಕ ಮತ್ತು ಹೊರಗುತ್ತಿಗೆ ನೌಕರ ಕಂಪ್ಯೂಟರ್ ಆಪ್‌ರೇಟರ್ ಮಾತ್ರ ಕಛೇರಿಯಲ್ಲಿ ಇದ್ದದ್ದು ಕಂಡು ಬಂದಿತು. ಉಳಿದವರು ಎಲ್ಲಿ ಎಂದು ರೈತರು ಪ್ರಶ್ನಿಸಿದರೆ ಸೈಟ್ ಬೇಟಿಗೆ ಹೋಗಿದ್ದಾರೆ ಎಂದು ಹೇಳಿದರು. ಆ ನಾಲ್ಕು ಜನ ಇಂಜಿನಿಯರ್ ಒಬ್ಬರೂ ಕೂಡ ಹಾಜರಿ ಪುಸ್ತಕದಲ್ಲಿ ಡಿ 1 ರಿಂದ 5 ರವರೆಗೆ ಸಹಿ ಮಾಡದೆ ಇರುವುದು ಕಂಡು ಕೆಂಡಾಮಂಡಲವಾದ ರೈತರು ಕೂಡಲೇ ಇವರನ್ನು ಅಮಾನತುಗೊಳಿಸಲು ಆಗ್ರಹಿಸಿದರು.