ಬೆಂಗಳೂರು, ಫೆ 3, ಉಪಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದ ಶಾಸಕರಾಗಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ರಿಝ್ವಾನ್ ಅರ್ಷದ್ ಸೋಮವಾರ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.ವಿಧಾನಸಭೆ ಸ್ಪೀಕರ್ ಕಚೇರಿಯಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ರಿಝ್ವಾನ್ ಅರ್ಷದ್ ಸತ್ಯ ಮತ್ತು ನಿಷ್ಠೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಎನ್.ಎ. ಹ್ಯಾರೀಸ್ ಮತ್ತು ರಿಝ್ವಾನ್ ಅರ್ಷದ್ ಅವರ ಕುಟುಂಬದ ಸದಸ್ಯರು ಹಾಜರಿದ್ದರು. ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ರೋಷನ್ ಬೇಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದರೆ ಉಪ ಚುನಾವಣೆಯಲ್ಲಿ ರೋಷನ್ ಬೇಗ್ ಅವರಿಗೆ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಬಿಜೆಪಿ ಶರವಣ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ರಿಜ್ವಾನ್ ಅರ್ಷದ್ ಗೆಲುವು ಪಡೆದಿದ್ದರು.