ಕಲಬುರಗಿ, ಫೆ. 7,ರಾಜ್ಯ ಸರ್ಕಾರ ಎಲ್ಲಾ ಭಾಗಗಳ ಅಭಿವೃದ್ಧಿಗೆ ಒತ್ತು ನೀಡಿ, ಕೂಡಲೇ ಸರ್ಕಾರ ನದಿ ತಿರುವು ಯೋಜನೆ ಜಾರಿಗೆ ತರಬೇಕು ಎಂದು ಹಿರಿಯ ಭೂ ವಿಜ್ಞಾನಿ ಎಚ್.ಎಸ್.ಎಂ.ಪ್ರಕಾಶ್ ಆಗ್ರಹಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 85 ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರನೇ ದಿನವಾದ ಇಂದು ಡಾ.ಬಿ.ಆರ್.ಅಂಬೇಡ್ಕರ್ ಸಮಾನಾಂತರ ವೇದಿಕೆಯಲ್ಲಿ ನಡೆದ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಕುರಿತ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಪತ್ತು ಕೇವಲ ಒಬ್ಬರಿಗೆ ಸೀಮಿತವಾಗಿಲ್ಲ. ಅದು ಎಲ್ಲರಿಗೂ ದಕ್ಕಬೇಕಾಗಿದೆ. ಆದ್ದರಿಂದ ನದಿ ತಿರುವುಗಳಂತಹ ಯೋಜನೆಗಳನ್ನು ಸರಕಾರ ಕೂಡಲೇ ಜಾರಿಗೆ ತರಬೇಕಾದ ಅಗತ್ಯವಿದೆ ಆಗ್ರಹಿಸಿದರು.
ಅಭಿವೃದ್ಧಿ ಎಂಬುದು ಕೇವಲ ಬೃಹತ್ ನಗರಗಳಿಗೆ ಮಾತ್ರ ಸೀಮಿಗೊಳಿಸುವುದು ಸಮಂಜಸವಲ್ಲ. ರಾಜ್ಯದ ಎಲ್ಲ ಭಾಗಗಳ ಅಭಿವೃದ್ಧಿಗೂ ಸರಕಾರ ಒತ್ತು ನೀಡಬೇಕು ಎಂದ ಅವರು, ವಾತಾವರಣದಲ್ಲಿನ ಬದಲಾವಣೆ ಮತ್ತು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಪ್ರವಾಹಗಳು ಉಂಟಾಗುತ್ತಿವೆ. ಇಂತಹ ಪ್ರವಾಹದ ನೀರನ್ನು ಒಂದೆಡೆ ಸಂಗ್ರಹಿಸಿ,ನದಿಗಳಿಗೆ ಹರಿಸುವ ಕೆಲಸ ಮತ್ತಷ್ಟು ಆಗಬೇಕಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ತಾಪಮಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಹೊರತು ಜಾಗತಿಕ ಕೂಲಿಂಗ್ ಬಗ್ಗೆ ಮಾತನಾಡುತ್ತಿಲ್ಲ. ಈ ಬಗ್ಗೆ ಮತ್ತಷ್ಟು ಚರ್ಚೆ ಆಗಬೇಕಾಗಿದೆ. ಪರಿಸರದಲ್ಲಿ ಆಗಾಗ ಕಂಡು ಬರುವ ಹವಾಮಾನ ಬದಲಾವಣೆಗೆ ಜ್ವಾಲಾ ಮುಖಿಗಳು ಮೂಲ ಕಾರಣವಾಗಿವೆ ಎಂದು ಅವರು ಪ್ರತಿಪಾದಿಸಿದರು.
ಕೊಡುಗು ಮತ್ತು ಕೇರಳದಲ್ಲಿ ಕಂಡು ಬಂದ ಪ್ರವಾಹಕ್ಕೆ ಜ್ವಾಲಾಮುಖಿಗಳು ಕಾರಣವಾಗಿವೆ. ಸಮುದ್ರದ ಆಳದಲ್ಲೂ ಜ್ವಾಲಾ ಮುಖಿಗಳಿವೆ. ಆದರೆ, ಅವುಗಳ ಬಗ್ಗೆ ಸರಿಯಾದ ಅಧ್ಯಯನವಾಗುತ್ತಿಲ್ಲ. ಹೀಗಾಗಿಯೇ ನೀರಿನ ಒಳಗಿರುವ ಸ್ಫೋಟಕ ಜ್ವಾಲಾ ಮುಖಿಗಳ ಚಟುವಟಿಕೆಗಳ ಬಗ್ಗೆ ಪೂರಕ ಮಾಹಿತಿ ಸಮಯಕ್ಕೆ ಸರಿಯಾಗಿ ದೊರಕುತ್ತಿಲ್ಲ ಎಂದು ಹೇಳಿದರು. ವೈದ್ಯ ವಿಜ್ಞಾನದ ಕುರಿತು ಹಿರಿಯ ವೈದ್ಯ ಡಾ.ಎಸ್.ಎಸ್. ಪಾಟೀಲ ಮಂದರವಾಡ ಮಾತನಾಡಿ, ಭಾರತದಲ್ಲಿ ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಪರಿಕಲ್ಪನೆಯಿತ್ತು. ಇದು ನಮ್ಮ ದೇಶದ ಆಧಾರ ಸ್ಥಂಭವಾಗಿದ್ದು, ಚರಕ ವೈದ್ಯರು ಹನ್ನೊಂದು ನೂರು ರೋಗಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದು ಸ್ಮರಿಸಿಕೊಂಡರು.
ದೇಶದಲ್ಲಿ ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿದೆ. ಅಲ್ಲದೆ, ಇಂದು ಕಾಣಿಸಿಕೊಳ್ಳುತ್ತಿರುವ ಅನೇಕ ಮಾರಕ ರೋಗಗಳಿಗೆ ಪರಿಹಾರ ಕಂಡುಕೊಳ್ಳಲು ಇಂದಿನ ವೈದ್ಯ ವಿಜ್ಞಾನ ಮುಂದಾಗಿದೆ. ನಮ್ಮ ಪೂರ್ವಜರು ಪೋಷಕಾಂಶ ತರಕಾರಿಗಳನ್ನು ಸೇವಿಸುತ್ತಿದ್ದರು. ಹಾಗಾಗಿಯೇ ಅವರು ಶತಾಯುಷರಾಗಿ ಬಾಳಿದರು. ಆದರೆ, ಇಂದು ಔಷದಿಗಳ ಸಿಂಪಡನೆಯಿಲ್ಲದೆ ತರಕಾರಿಗಳು ಮಾರುಕಟ್ಟೆಗೆ ಬರುವುದಿಲ್ಲ. ಇಂತಹ ತರಕಾರಿಗಳ ಸೇವನೆ ಕೂಡ ಆರೋಗ್ಯಕ್ಕೆ ಹಾನಿಕಾರ ಎಂದು ಅವರು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಗೋಷ್ಠಿಯಲ್ಲೊಬ್ಬರು ಮದುವೆಯಾಗಲು ಸೂಕ್ತ ವಯಸ್ಸು ಎಷ್ಟು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ಷಮಿಸಿ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ 18 ಗಂಡು ಮಕ್ಕಳಿಗೆ 21 ವರ್ಷ. ಆದರೆ, ವೈಜ್ಞಾನಿಕವಾಗಿ ಪ್ರತಿಯೊಬ್ಬರಿಗೂ 17 ವರ್ಷದಲ್ಲಿ ಮದುವೆಯಾದರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಾ, ಚಿದಾನಂದಗೌಡ ಕನ್ನಡದಲ್ಲಿ ವಿಜ್ಞಾನ ಶಿಕ್ಷಣ ಕುರಿತು ಆಶಯನುಡಿ ಮಾತನಾಡಿದರು. ಸ್ವಾಗತವನ್ನು ನಾಗರಾಜ ಹಣಗಿ, ನಿರೂಪಣೆ ಶಿವಕುಮಾರ್ ಶಾಸ್ತ್ರಿ, ನಿರ್ವಹಣೆ ಶಿವಾನಂದ್ ಗೌಡ ಹಂಗರಗಿ, ವಂದನಾರ್ಪಣೆ ಜಮಾಲಸಾಬ್ ಧನ್ನೂರು, ನೆರವೇರಿಸಿಕೊಟ್ಟರು.