ವಾಷಿಂಗ್ಟನ್, ಜೂನ್ 26: ಕ್ರಾಂತಿಕಾರಿ ಚೆ ಗುವೇರಾ ನಡೆಸಿದ ಹೋರಾಟಗಳ ಬಗ್ಗೆ ಜಗತ್ತಿನಾದ್ಯಂತ ಈಗಲೂ ಜನಜನಿತ. ಅವರ ಆಲೋಚನೆಗಳು, ಮಾತುಗಳು ಯುವಜನಾಂಗಕ್ಕೆ ಈಗಲೂ ಮಾದರಿಯಾಗಿವೆ. ೧೯೨೮ರಲ್ಲಿ ಚೆ ಗುವೇರಾ ಅರ್ಜೆಂಟೀನಾದ ರೊಸಾರಿಯೋದಲ್ಲಿನ ನಿಯೋ ಕ್ಲಾಸಿಕಲ್ ಕಟ್ಟಡದಲ್ಲಿ ಜನಿಸಿದ್ದರು. ಈ ಕಟ್ಟಡವನ್ನು ಈಗ ಮಾರಾಟಕ್ಕೆ ಇರಿಸಲಾಗಿದೆ. ೨೦೦೨ರಲ್ಲಿ ಈ ಕಟ್ಟಡವನ್ನು ಫ್ರಾನ್ಸಿಸ್ಕೊ ಫರುಜಿಯಾ ಎಂಬುವರು ಖರೀದಿಸಿದ್ದರು. ೨೪೦ ಚದರ ಅಡಿ ವಿಸ್ತೀರ್ಣದ ಈ ಕಟ್ಟಡವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸಬೇಕೆಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಅದನ್ನು ಮಾರಾಟ ಮಾಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ. ಆದರೆ ಅದರ ಬೆಲೆಯನ್ನು ಬಹಿರಂಗಪಡಿಸಿಲ್ಲ. ಉರ್ಕಿಜಾ ಮತ್ತು ಎಂಟ್ರೆ ರಿಯಾಸ್ ನಡುವೆ ಇರುವ ಈ ಕಟ್ಟಡ ಹಲವು ವರ್ಷಗಳಿಂದ ಪ್ರವಾಸಿಗರನ್ನು ಆಕರ್ಷಿಸಿದೆ.
ಉರುಗ್ವೆಯ ಮಾಜಿ ಅಧ್ಯಕ್ಷ ಜೋಸ್ ಪಿಪಿ ಮುಸಿಕಾ ಈ ಕಟ್ಟಡಕ್ಕೆ ಭೇಟಿ ನೀಡಿದ ಗಣ್ಯರಪಟ್ಟಿಲ್ಲಿದ್ದಾರೆ ೧೯೫೦ರಲ್ಲಿ ದಕ್ಷಿಣ ಅಮೆರಿಕಾವನ್ನು ಬೈಕ್ ಮೂಲಕ ಪರ್ಯಟನೆ ನಡೆಸಿದ್ದ ಆಲ್ಬರ್ಟೊ ಗ್ರೆನಾಡೋಸ್ ಕೂಡ ಇಲ್ಲಿಗೆ ಭೇಟಿ ನೀಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ ಚೆ ಗುವೇರಾ ಕವಿ, ಬುದ್ದಿಜೀವಿ, ಕಮ್ಯುನಿಸ್ಟ್, ಸಿದ್ಧಾಂತಿ ಹಾಗೂ ಮಾನವತಾವಾದಿಯಾಗಿದ್ದರು. ಶೋಷಣೆಯನ್ನು ಪ್ರತಿಭಟಿಸಿ ಅವರು ಕ್ಯೂಬಾ ಕ್ರಾಂತಿಯಲ್ಲಿ ಭಾಗವಹಿಸಿ ತಮ್ಮ ಜೀವವಿರುವವರೆಗೂ ಹೋರಾಡಿದರು. ಫಿಡೆಲ್ ಕ್ಯಾಸ್ಟ್ರೊ ಸರ್ಕಾರದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ, ಬೊಲಿವಿಯಾದಲ್ಲಿ ಬಡವರಿಗೆ ಅನ್ಯಾಯವಾಗುತ್ತಿದೆ ಎಂದು, ಸಚಿವ ಸ್ಥಾನ ತ್ಯಜಿಸಿ ಮತ್ತೆ ಹೋರಾಟ ಆರಂಭಿಸಿದ್ದರು. ಈ ಕ್ರಮವಾಗಿ ಅಕ್ಟೋಬರ್ ೯, ೧೯೬೭ ರಂದು, ಬೊಲಿವಿಯನ್ ಪಡೆಗಳು ಚೆನುವಾರನ್ನು ಸುತ್ತುವರಿದು ಹತ್ಯೆ ನಡೆಸಿದ್ದವು. ನಂತರ ಅವರ ಮೃತ ದೇಹವನ್ನು ಜಗತ್ತಿಗೆ ತೋರಿಸಲಿಲ್ಲ. ೧೯೯೭ ರಲ್ಲಿ, ಅವರ ದೇಹದ ಅವಶೇಷ ಪತ್ತೆಯಾದಾಗ ಕ್ಯೂಬಾಗೆ ಕೊಂಡೊಯ್ದು ಮತ್ತೊಮ್ಮೆ ಸಮಾಧಿ ಮಾಡಲಾಗಿತ್ತು.