ಹಾವೇರಿ19: ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಂದ ತಾಲೂಕು ಕಂದಾಯ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರು ತಾವು ಕಾರ್ಯನಿರ್ವಹಿಸುವ ಸ್ಥಳದಿಂದ ನಿತ್ಯ ಸೆಲ್ಫಿ ಫೋಟೋ ಅಪ್ಲೋಡ್ಮಾಡಿ ತಾವು ಕರ್ತವ್ಯಕ್ಕೆ ಹಾಜರಾದ ಕುರಿತಂತೆ ದೃಢೀಕರಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ನೂತನವಾಗಿ ಜಾರಿಗೊಳಿಸಿದೆ.
ಈ ಕುರಿತಂತೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಈಗಾಗಲೇ ಹಾವೇರಿ ಜಿಲ್ಲಾ ಪಂಚಾಯತ್ನಲ್ಲಿ ಜಾರಿಗೊಳಿಸಲಾದ ಸೆಲ್ಫಿವಿತ್ ಫೋಟೋ ವ್ಯವಸ್ಥೆಯನ್ನು ಕಂದಾಯ ಇಲಾಖೆಯಲ್ಲೂ ಜಾರಿಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಕಳೆದ ಮೂರ್ನಾಲ್ಕು ದಿನದಿಂದ ಈ ವ್ಯವಸ್ಥೆ ಜಾರಿಯಲ್ಲಿದ್ದು, ಮುಂದಿನ ವಾರದಲ್ಲಿ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದರು.
ಯಾವುದೇ ಗ್ರಾಮದ ಗ್ರಾಮ ಸಹಾಯಕ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿ, ತಾಲೂಕಾ ತಹಶೀಲ್ದಾರ ಕಚೇರಿ, ವೃತ್ತ ರೆವಿನ್ಯೂ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾದ ತಕ್ಷಣ ಸೆಲ್ಫಿತೆಗೆದು ಇದಕ್ಕಾಗಿ ರಚನೆಮಾಡಲಾದ ವಾಟ್ಸಾಪ್ ಗ್ರೂಪ್ಗೆ ಅಪ್ಲೋಡ್ ಮಾಡಬೇಕು. ಇದರಿಂದ ಯಾವ ನೌಕರ ಕಚೇರಿಗೆ ಯಾವ ಸಮಯದಲ್ಲಿ ಹಾಜರಾಗಿದ್ದಾನೆ ಅಥವಾ ನಿಯೋಜಿತ ಕೆಲಸಗಳಿದ್ದರೆ ಎಲ್ಲಿಗೆ ಹೋಗಿದ್ದಾರೆ, ಯಾವ ದಿನಾಂಕ, ಯಾವ ಸಮಯ ಎಂದು ನಮೂದಾಗಿ ಫೋಟೋ ಅಪ್ಲೋಡ್ ಆಗುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಆಡಳಿತದಲ್ಲಿ ಸುಧಾರಣೆಯ ಜೊತೆಗೆ ಸಾರ್ವಜನಿಕ ಕೆಲಸಗಳು ನಿಗಧಿತ ವೇಳೆಯಲ್ಲಿ ನಡೆಯುತ್ತವೆ. ನೌಕರರ ದಕ್ಷತೆ, ಪ್ರಾಮಾಣಿಕತೆ ಹೆಚ್ಚಳವಾಗುತ್ತದೆ. ಅಸಡ್ಡೆ, ನಿರ್ಲಕ್ಷ್ಯ ತಪ್ಪುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ತಿಳಿಸಿದರು.
ಪ್ರತಿ ತಾಲೂಕಿಗೆ ಒಂದು ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಈ ಗ್ರೂಪ್ಗೆ ಆಯಾ ತಾಲೂಕಿನ ಎಲ್ಲ ಕಂದಾಯ ನೌಕರರು ಸೆಲ್ಫಿ ಫೋಟೋ ಅಪ್ಲೋಡ್ ಮಾಡಬೇಕು. ತಹಶೀಲ್ದಾರಗಳು ಇದರ ಉಸ್ತುವಾರಿನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಪವಿಭಾಗಾಧಿಕಾರಿಗಳನ್ನು ಈ ಗ್ರೂಪ್ಗೆ ಸೇರ್ಪಡೆಮಾಡಿ ಪರಿಶೀಲನೆಗೆ ನೋಡಲ್ ಅಧಿಕಾರಿಗಳನ್ನಾಗಿ ಮಾಡಲಾಗುವುದು. ಈಗಾಗಲೇ ಈ ಗ್ರೂಪ್ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಎಲ್ಲ ತಾಲೂಕಿನ ಗ್ರೂಪ್ಗಳಲ್ಲಿ ಸೇರ್ಪಡೆಮಾಡಲಾಗುವುದು. ಈ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ಕಚೇರಿಗೂ ವಿಸ್ತರಿಸಲಾಗುವುದು ಎಂದು ವಿವರಿಸಿದರು.