ನವದೆಹಲಿ, ಜನವರಿ 10, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಣಿವೆಯಲ್ಲಿ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯ ತೀರ್ಪು ಇಂದು ಹೊರ ಬೀಳುವ ಸಾಧ್ಯತೆಯಿದೆ. ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್, ಕಾಶ್ಮೀರ ಟೈಮ್ಸ್ ನ ಕಾರ್ಯನಿರ್ವಾಹಕ ಸಂಪಾದಕ ಅನುರಾಧಾ ಭಾಸಿನ್ ಮತ್ತಿತರರರು ಕಣಿವೆಯಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿದ್ದರು. 'ರಾಜ್ಯದಲ್ಲಿ ವಿಧಿಸಲಾಗಿರುವ ನಿರ್ಬಂಧಗಳು ಮೂಲಭೂತ ಹಕ್ಕುಗಳ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಅರೋಪಿಸಿದ್ದರು . ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಮತ್ತು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿರುವ ತ್ರಿಸದಸ್ಯಪೀಠ ತೀರ್ಪು ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿ ತಿಳಿಸಿದೆ.ರಾಜ್ಯದ ವಿಶೇಷ ಸ್ಥಾನಮಾನ ರದ್ದತಿಯಿಂದ ಆಗಬಹುದಾದ ಪ್ರತಿಭಟನೆಗಳನ್ನು ನಿಯಂತ್ರಿಸುವ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಮೂವರು ಮಾಜಿ ಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮತ್ತು ಮೆಹಬೂಬಾ ಮುಫ್ತಿ ಮತ್ತು ಅನೆಕ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.