ಬೆಂಗಳೂರು,ಆ 11 ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಸಿಗಬೇಕು ಎಂದು ಕನ್ನಡಿಗರು ನಡೆಸುತ್ತಿರುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಬೆಂಬಲ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಸರ್ಕಾರದ ಸದಾಶಯವೂ ಇದೇ ಆಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಕೆಲವು ಖಾಸಗಿ ಕಂಪನಿಗಳು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಅರ್ಜಿಯಲ್ಲಿ ಉತ್ತರ ಭಾರತದ ಅಭ್ಯರ್ಥಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಿರುವುದನ್ನು ವಿರೋಧಿಸಿರುವ ನೆಟ್ಟಿಗರು #ಏಚಿಡಿಟಿಚಿಣಚಿಞಚಿಎಠಛಈಠಡಿಏಚಿಟಿಟಿಚಿಜರಚಿ ಹ್ಯಾಶ್ ಟ್ಯಾಗ್ ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ದಕ್ಷಿಣ ಭಾರತದ ಅಭ್ಯರ್ಥಿಗಳನ್ನು ಕಡೆಗಣಿಸಬೇಕು ಎಂಬಂತಹ ಉಲ್ಲೇಖಗಳು ಅರ್ಜಿಯಲ್ಲಿ ಲಭ್ಯವಿರುವ ಸ್ಕ್ರೀನ್ಶಾಟ್ಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ನೇಮಕಾತಿ ವೇಳೆ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಬಲ್ಲವರಿಗೆ ಹೆಚ್ಚಿನ ಆದ್ಯತೆ ಎಂಬುದನ್ನು ಖಂಡಿಸಿರುವ ಕನ್ನಡಿಗರು ರಾಜ್ಯದಲ್ಲಿಯೇ ಕನ್ನಡಕ್ಕೆ ಇಂತಹ ದುರ್ಗತಿ ಬಂದಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣದ ಅಭಿಯಾನಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಹೆಚ್ಚು ಸಿಗಬೇಕು ಎನ್ನುವುದೇ ನಮ್ಮ ಸರಕಾರದ ಆಶಯ. ಸರ್ಕಾರದ ನೀತಿಯೂ ಸಹಾ ಈ ನಿಟ್ಟಿನಲ್ಲಿದೆ.ಈ ನೆಲದ ಭಾವನೆಗಳನ್ನು ನಾವು ಸದಾ ಗೌರವಿಸುತ್ತೇವೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ನೀಡಿದ್ದಾರೆ. ರಾಜ್ಯದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.90ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು, ಈಗಾಗಲೇ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ ಮಸೂದೆಗೆ ಆಂಧ್ರ ಪ್ರದೇಶದ ವಿಧಾನಸಭೆ ಅಂಗೀಕರಿಸಿದ ಬಗ್ಗೆ ಉಲ್ಲೇಖಿಸಿರುವ ಹೋರಾಟಗಾರರು, ರಾಜ್ಯದಲ್ಲು ಇಂತಹ ಕಾನೂನನ್ನು ಜಾರಿಗೆ ತರುವ ಮೂಲಕ ಸ್ಥಳೀಯರ ಹಿತ ರಕ್ಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ಆಗಸ್ಟ್ 13 ಮತ್ತು 14 ಕ್ಕೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಾಗೂ ಎಲ್ಲಾ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಬೇಕೆಂದು ಸಾಮಾಜಿಕ ಜಾಲ ತಾಣದ ಮೂಲಕ ಕರೆ ನೀಡಿದ್ದಾರೆ.