ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಹೆಚ್ಚಳದಲ್ಲಿ ಸಂಶೋಧನೆ,

Research in increasing value added food products

ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಹೆಚ್ಚಳದಲ್ಲಿ  ಸಂಶೋಧನೆ,

ಧಾರವಾಡ 16: ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದು, ಮೌಲ್ಯವರ್ಧಿತ ಆಹಾರ ಉತ್ಪನ್ನಗಳ  ಹೆಚ್ಚಳಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳಾಗಬೇಕು ಮತ್ತು ಸಿ.ಎಸ್‌.ಆರ್, ಐ.ಸಿ.ಎ.ಆರ್ ನಿಧಿಗಳ ಬಳಕೆಗೆ ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ಆದ್ಯತೆ ನೀಡಬೇಕೆಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಹೇಳಿದರು.  

ಅವರು ಇಂದು ಬೆಳಿಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯ ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.  

ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲಬು, ರೈತರ ತಲಾ ಆದಾಯವನ್ನೂ ಇನ್ನು ಎಂಟುಪಟ್ಟು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ ಕೃಷಿಯಲ್ಲಿ ಸಾಂಪ್ರದಾಯಿಕತೆ ಉಳಿಸಿಕೊಂಡು ಆಧುನಿಕತೆ ಅಳವಡಿಸಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಉಪರಾಷ್ಟ್ರಪತಿಗಳು ತಿಳಿಸಿದರು.  

ಕೃಷಿಗೆ ಭಾರತ ಸರಕಾರ ಮೊದಲಿನಿಂದಲೂ ಆದ್ಯತೆ ನೀಡಿದೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಜೊತೆಗೆ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಜೈ ಅನುಸಂದಾನ ಸೇರಿಸಿ, ಮಹತ್ವಪೂರ್ಣಗೊಳಿಸಿದ್ದಾರೆ. ರೈತರ ಹೊಲಗಳು ಸಮೃದ್ಧ ಬೆಳೆಗಳಿಂದ ಬೆಳೆದಾಗ ಮಾತ್ರ ದೇಶವು ಹೊಳೆಯುತ್ತದೆ. ಎಲ್ಲ ಸಂಶೋಧನೆಗಳು ಪ್ರಯೋಗಾಲಯದಿಂದ ನೇರವಾಗಿ ರೈತರ ತೋಟಗಳಿಗೆ ತಲುಪಬೇಕು. ತಜ್ಞರು, ಸಂಶೋಧಕರ ಲಾಭವನ್ನು ರೈತರು ಪಡೆದುಕೊಳ್ಳಬೇಕು. ಅಂದಾಗ ಕೃಷಿ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯಗಳ ಸೇವೆ ಸಾರ್ಥಕವಾಗುತ್ತದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು.    

ಧಾರವಾಡ ಕೃಷಿ ವಿಶ್ವವಿದ್ಯಾಲಯ, ಮಾದರಿ ವಿಶ್ವವಿದ್ಯಾಲಯವಾಗಿದೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗಳಿಸಿದೆ. ಇಲ್ಲಿನ ಸಂಶೋಧನೆಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಇದು ನಮಗೆಲ್ಲ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ಅವರು ಹೇಳಿದರು.  

ಘನ ಉಪಸ್ಥಿತರಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಾತನಾಡಿ, ಭಾರತೀಯರಿಗೆ ಕೃಷಿ ಮೂಲ ಉದ್ಯೋಗವಾಗಿದೆ. ದೇಶದ ಅಭಿವೃದ್ಧಿಗೆ ಇದು ಪೂರಕವಾಗಿದೆ. ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆ ಇರುವಂತೆ ಕೃಷಿಯಲ್ಲಿಯೂ ಸ್ಪರ್ಧೆ ಏರ​‍್ಪಟಟಿದೆ ಎಂದು ಅವರು ಹೇಳಿದರು.  

ಕೃಷಿಯಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿ, ಆದಾಯ ಹೆಚ್ಚಿಸಲು ಕ್ರಮವಹಿಸಬೇಕು. ರೈತರಿಗೆ ಹೆಚ್ಚು ಲಾಭ ಮತ್ತು ಉಪಯುಕ್ತವಾಗುವ ಕೃಷಿ ಸಂಶೋಧನೆಗಳನ್ನು ತಜ್ಞರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮಾಡಬೇಕೆಂದು ಅವರು ತಿಳಿಸಿದರು.  

ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಜನಸಾಮಾನ್ಯರ ಅದರಲ್ಲೂ ಸಾಮಾನ್ಯ ರೈತರ ವಿಶ್ವವಿದ್ಯಾಲಯವಾಗಿದೆ. ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದೆ. ಕೃಷಿ ಮಹಾವಿದ್ಯಾಲಯಕ್ಕೆ 75 ವರ್ಷ ಪೂರ್ಣಗೊಂಡು, ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.  

ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಕೇಂದ್ರ ಸರಕಾರದಿಂದ ಹವಾಮಾನ ಸಂಶೋಧನ ಕೇಂದ್ರ ಸ್ಥಾಪಿಸಲು ಅನುಮತಿ ದೊರೆತಿದ್ದು, ಇದು ಸುಮಾರು 175 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ನಿಖರವಾದ ಹವಾಮಾನ ವರದಿಯನ್ನು ನೀಡುತ್ತದೆ. ರೈತರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.  

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೃಷಿ ವಲಯಕ್ಕೆ ಆದ್ಯತೆ ನೀಡಿದ್ದು, ಪ್ರಸಕ್ತ ವರ್ಷ ಕೇಂದ್ರ ಬಜೆಟ್‌ದಲ್ಲಿ 127 ಸಾವಿರ ಕೋಟಿ ರೂ.ಗಳ ಹಣ ಪೂರೈಸಿದೆ. ಸಕ್ಕರೆ ಉತ್ಪಾದನೆ, ತೈಲ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನಗಳ ಹೆಚ್ಚಳಕ್ಕೆ ಅಗತ್ಯವಿರುವ ಕಚ್ಚಾವಸ್ತುಗಳ ಉತ್ಪಾದನೆ, ಸಂಸ್ಕರಣೆ ಪೂರಕವಾದ ಯೋಜನೆ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು. 

ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌. ಲಾಡ್, ಶ್ರೀಮತಿ ಡಾ. ಸುದೇಶ ಜಗದೀಪ ಧನಕರ್ ಅವರು ವೇದಿಕೆಯಲ್ಲಿದ್ದರು. 

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್‌. ಪಾಟೀಲ ಅವರು ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಸವರಾಜ ಕುಂದಗೋಳಮಠ, ರವಿಕುಮಾರ ಮಾಳಿಗೇರ, ಪಾರ್ವತಿ ಕುರ್ಲೆ, ಶ್ರೀನಿವಾಸ ಕೋಟ್ಯಾನ್ ಸೇರಿದಂತೆ ಇತರ ಸದಸ್ಯರು, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು, ಕೃಷಿ ವಿವಿ ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರು, ಅಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.