ಕೊಪ್ಪಳ 13: ಜಿಲ್ಲೆಯ ಶಾಲೆಗಳಲ್ಲಿ ಬೋಧನಾ ಗುಣಮಟ್ಟ ಸುಧಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರ ಮುಖಾಂತರ ಶಾಲಾ ಪಾಲಕರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊಪ್ಪಳ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ,ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಸಾರ್ವತ್ರಿಕವಾಗಿ ಪ್ರತಿವರ್ಷವೂ ಶೈಕ್ಷಣಿಕ ಬೋಧನಾ ಗುಣಮಟ್ಟ ಕುಸಿಯುತ್ತಾ ಬಂದಿದೆ. ಅದರ ಪರಿಣಾಮ ಪ್ರೌಢ ಶಾಲೆಯಲ್ಲಿ ಕಾಣುತ್ತಿದೆ,ಕಳಪೆ ಮಟ್ಟದ ಬೋಧನೆ ಮಾಡುತ್ತಿರುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ.ಅನರ್ಹ ಶಿಕ್ಷಕರಿಂದ ತಮ್ಮ ತರಗತಿಯ ಬೋಧನಾ ಅವಧಿಯಲ್ಲಿ ಮಕ್ಕಳಿಗೆ ಒಳಗೆ ನಡಿ, ಕೈ ಕಟ್, ಗಪ್ ಚುಪ್, ಬಾಯಿ ಮುಚ್ಚ್, ಘಂಟೆ ಹೊಡೆ ಹೊರ ನಡಿ ಅನ್ನುವಂತಾಗಬಾರದು,ಕೆಲ ತಿಂಗಳುಗಳ ಹಿಂದೆ ನಡೆಸಿದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 7,000ಕ್ಕೂ ಹೆಚ್ಚು ಆಯಾ ಮಧ್ಯಮಗಳಲ್ಲಿ ವಿದ್ಯಾರ್ಥಿಗಳು ಕಲಿತ ಕನ್ನಡ, ಆಂಗ್ಲ ಭಾಷೆ ಓದಲು,ಬರೆಯಲು ಬರುತ್ತಿಲ್ಲ ಎಂಬ ಸಂಗತಿ ಸರ್ಕಾರಕ್ಕೆ ನಾಚಿಕೆಗೇಡಿನ ಪ್ರಶ್ನೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಗಮನ ಕೊಟ್ಟು ಸಮರ್ಥವಾಗಿ ಬೋಧಿಸುವಂತೆ ಈ ಹಿಂದಿನ ಅಧಿಕಾರಿಗಳು ಸೂಚಿಸಿದ್ದರೂ ಕೆಲ ಶಿಕ್ಷಕರು ಅನುಷ್ಠಾನಗೊಳಿಸದೆ,ವಿದ್ಯಾರ್ಥಿಗಳನ್ನು ಹೊಣೆಗಾರರನ್ನಾಗಿಮಾಡಿ ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಾ ಬಂದಿದ್ದಾರೆ. ಮಕ್ಕಳ ಮನೋವಿಜ್ಞಾನ ಪುಸ್ತಕಗಳನ್ನು ಓದದ ಅಥವಾ ಓದಿಯೂ ವೈಜ್ಞಾನಿಕವಾಗಿ ಬೋಧಿಸದೆ.ಮಕ್ಕಳನ್ನು ಬೋಧನೆಯಿಂದ ಆಕರ್ಷಣೆಗೊಳಪಡಿಸಿ ಸಂಪೂರ್ಣ ಗಮನವನ್ನು ತಮ್ಮ ಕಡೆ ಸೆಳೆದುಕೊಳ್ಳುವಲಿ ವಿಫಲರಾಗಿದ್ದಾರೆ,ಬೋಧನಾ ತಂತ್ರಗಾರಿಕೆಯಿಂದ ವಿಫಲವಾಗಿರುವ ಬೋಧಕರು ಮಕ್ಕಳ ಮೇಲೆ ತಪ್ಪನ್ನು ಹೋರಿಸಿ ತಮ್ಮ ವೈಫಲ್ಯತೆಯನ್ನು ಮುಚ್ಚಿಕೊಳ್ಳುತ್ತಾ ಬಂದಿದ್ದಾರೆ. ಪ್ರಾಥಮಿಕ ಅಷ್ಟೇ ಅಲ್ಲ ಪ್ರೌಢ ಶಾಲೆಗಳಲ್ಲೂ ಪ್ರತಿಯೊಂದು ವರ್ಗದಲ್ಲೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಶಿಕ್ಷಕರು ಫಲಕದ ಮೇಲೆ ಬರೆದದ್ದನ್ನು ವೇಗವಾಗಿ ಬರೆದುಕೊಳ್ಳುತ್ತಾರೆ. ಉಳಿದವರು ಮೇಲಿನಿಂದ ನಿಧಾನವಾಗಿ ಬರೆದುಕೊಳ್ಳುತ್ತಿರುವಾಗ ಎಲ್ಲರೂ ಬರೆದುಕೊಂಡಿದ್ದೀರಾ ? ಎಂದು ಕೇಳಿದಾಗ ಹಾ... ಎಂದು ವೇಗವಾಗಿ ಬರೆದುಕೊಂಡ ಮಕ್ಕಳು ಹೇಳಿದ ಕೊಡಲೆ ಬೋಧಕರು ಗೋಡೆ ಫಲಕದ ಬರಹ ಅಳಿಸಿ ತಮ್ಮ ಬರವಣಿಗೆ ಮುಂದುವರಿಸಿಕೊಂಡು ಹೋಗುತ್ತಾರೆ.
ಉಳಿದ ಬಹುತೇಕ ನಿಧಾನ ಗತಿಯ ಮಕ್ಕಳು ಬರವಣಿಗೆಯಿಂದ ವಂಚಿತರಾಗಿ,ಬರವಣಿಗೆ ಅಪೂರ್ಣಗೊಳಿಸಿ ಪರೀಕ್ಷೆಯಲ್ಲಿ ಅಷ್ಟಕಷ್ಟೇ ಬರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಸರ್ಕಾರಿ,ಖಾಸಗಿ ಶಾಲೆಗಳಲ್ಲಿ ಕಳಂಕವಾಗಲು ಬೋಧನಾ ವಿಧಾನ ತಿಳಿಯದೆ ಇರುವಂತಹ ಅನೇಕ ಅನರ್ಹ ಶಿಕ್ಷಕರು ಸಂಪೂರ್ಣ ಹೊಣೆಗಾರರಾಗಿದ್ದು.ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮದ ಶಾಲೆಗಳಾಗಿದ್ದರೂ ಬಹುತೇಕ ವಿದ್ಯಾರ್ಥಿಗಳು ವ್ಯಾಕರಣಬದ್ಧವಾಗಿ ಕನ್ನಡ ಭಾಷೆ. ಆಂಗ್ಲ ಭಾಷೆ ಕಲಿತಿಲ್ಲ ಅನ್ನೋದಕ್ಕಿಂತ ಕನ್ನಡ, ಆಂಗ್ಲ ಹಾಗೂ ಹಿಂದಿ ವಿಷಯಗಳನ್ನು ಸ್ಪಷ್ಟವಾಗಿ ಓದಲು ಬರೆಯಲು ಸಹ ಬಾರದ ಮಕ್ಕಳ ಸಂಖ್ಯೆ ಹೆಚ್ಚಿದೆ. ಆಯಾ ಶಾಲೆಗಳ ಮಕ್ಕಳ ಫಲಿತಾಂಶ ದಾಖಲೆಗಳನ್ನು ಪರೀಶೀಲಿಸಿ ಕಡಿಮೆ ಅಂಕ ಪಡೆದ ವಿಷಯಗಳ ಆಯಾ ಬೋಧಕರನ್ನು ತಕ್ಷಣ ಸೇವೆಯಿಂದ ತೆಗೆದುಹಾಕಿ. ಉನ್ನತ ಅರ್ಹತಾ ಪದವಿಗಳನ್ನು ಪಡೆದ ಮಕ್ಕಳ ಮನೋವಿಜ್ಞಾನ ಓದಿ ತಿಳಿದುಕೊಂಡು ಗುಣಮಟ್ಟದಿಂದ ಬೋಧಿಸುವ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ದೃಢವಾದ ಕ್ರಮ ಕೈಗೊಳ್ಳುವಿರೆಂದು ಆಶಿಸುತ್ತೇವೆ. ಕೊಪ್ಪಳ ಜಿಲ್ಲೆಯ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದಿನಲ್ಲಿ ಹಿಂದುಳಿದಂತಹ ಮಕ್ಕಳಿಗೆ ಆಪ್ತ ಸಮಾಲೋಚಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಆರ್ಹ ವಿಷಯವಾರು ಗುಣಮಟ್ಟದ ಶಿಕ್ಷಕರನ್ನು ನೇಮಕ ಮಾಡಬೇಕು.ಪ್ರಾಥಮಿಕ ಶಾಲೆಗಳಲ್ಲಿ ಪ್ರತ್ಯೇಕ ಗ್ರಂಥಾಲಯಗಳ ಕಡ್ಡಾಯವಾಗಿ ಪ್ರಾರಂಭಿಸಿ, ಆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು.ಕೆಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಒಂದು ಎರಡು ಮೂರನೇ ತರಗತಿಗಳು ಮತ್ತು 4,5,6 ನೇ ತರಗತಿ ಮಕ್ಕಳಿಗೆ ಒಂದುಗೂಡಿಸಿ ಒಂದೇ ಕೊಠಡಿಯಲ್ಲಿ ಪಾಠ ಮಾಡುವುದರಿಂದ ಮಕ್ಕಳ ಗ್ರಹಿಕೆಗೆ ಆಡಚಣೆ ಉಂಟಾಗುತ್ತದೆ, ಜಿಲ್ಲೆಯ ಶಾಲೆಗಳಲ್ಲಿ ತರಗತಿ ಹಾಗೂ ಮಕ್ಕಳಿಗೆ ತಕ್ಕಂತೆ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಬೇಕು.ಶಿಕ್ಷಕರಿಗೆ ಸರ್ಕಾರದ ಅನಿವಾರ್ಯ ಕರ್ತವ್ಯಗಳು ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ನಿಯೋಜಿಸಬಾರದು.ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಪ್ರತಿಯೊಂದು ಕೊಠಡಿಗಳಲ್ಲಿ, ಕಾರ್ಯಾಲಯ ಮತ್ತು ಆವರಣಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಬೇಕು,ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕರಿಗೆ ಶಾಲೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಬೇಕು,ಕಲಿಕಾ ಸಮಸ್ಯೆ ಪರಿಹರಿಸಿ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಗುಣಮಟ್ಟ ಇದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವಿರೆಂದು ನೀರೀಕ್ಷಿಸುತ್ತೇವೆ.
ನಿಮ್ಮ ಮೇಲೆ ಬಹು ನೀರೀಕ್ಷೆಗಳನ್ನು ಇಟ್ಟುಕೊಂಡು ನಮ್ಮ ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆಂದು ಶಾಲಾ ಪಾಲಕರ ಹೋರಾಟ ಸಮಿತಿ ಸಂಚಾಲಕ ಎಸ್.ಎ. ಗಫಾರ್.ಸಂಘಟನಾ ಸಂಚಾಲಕ ಸುಂಕಪ್ಪ ಮೀಸಿ,ಭ್ರಾತೃತ್ವ ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನಬಸಪ್ಪ ಅಪ್ಪಣ್ಣವರ್, ವಿಮುಕ್ತಿ ವಿದ್ಯಾ ಸಂಸ್ಥೆಯ ಕಾರ್ಯಕರ್ತ ವೀರೇಶ್ ತೆಗ್ಗಿನಮನಿ ಮುಂತಾದವರು ಒತ್ತಾಯಿಸಿದರು.