ಬೆಂಗಳೂರು, ಮೇ 23,ಲಾಕ್‌ಡೌನ್ ಪರಿಣಾಮದಿಂದ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ವಿಶ್ವಕರ್ಮ ಜನಾಂಗದ ಕಾರ್ಮಿಕರಿಗೂ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿ, ಸಹಾಯ ಮಾಡಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಮಿತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದೆ.ನಗರದಲ್ಲಿಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಹೋರಾಟ ಸಮಿತಿ ರಾಜ್ಯಾಧ್ಯಕ್ಷೆ ಗಾಯತ್ರಿ ಚಂದ್ರಶೇಖರ್ ನೇತೃತ್ವದಲ್ಲಿ ಸದಸ್ಯರು ಮನವಿ ಸಲ್ಲಿಸಿ, ವಿಶ್ವಕರ್ಮ ಸಮುದಾಯಕ್ಕೂ ಪ್ಯಾಕೇಜ್ ಘೋಷಿಸಬೇಕೆಂದು ಮನವಿ ಮಾಡಿದರು.
ರಾಜ್ಯ ವ್ಯಾಪ್ತಿಯಲ್ಲಿ 46 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ವಿಶ್ವಕರ್ಮ ಸಮುದಾಯದವರು, ಪ್ರಮುಖವಾಗಿ ಕುಲ ಕಸುಬುಗಳನ್ನೇ ನಂಬಿದ್ದಾರೆ. ಆದರೆ, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿದ ಲಾಕ್ ಡೌನ್ ಪರಿಣಾಮ ಆರ್ಥಿಕವಾಗಿ ಭಾರೀ ನಷ್ಟ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರವೇ ನಮ್ಮ ಸಹಾಯಕ್ಕೆ ಧಾವಿಸಬೇಕೆಂದು ಆಗ್ರಹಿಸಿದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 1610 ಕೋಟಿ ರೂ. ಸೇರಿದಂತೆ ಇದುವರೆಗೂ ಮೂರು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ, ಇದರಲ್ಲಿ ವಿಶ್ವಕರ್ಮ ಸಮುದಾಯವನ್ನು ಹೊರಗಿಟ್ಟಿರುವುದು ಸರಿಯಲ್ಲ. ಅಲ್ಲದೆ, ಪಂಚ ಕಸುಬು ಕೆಲಸಗಾರರಾದ ವಿಶ್ವಕರ್ಮ ಸಮಾಜದ ಕಷ್ಟ-ನಷ್ಟಗಳು ರಾಜ್ಯ ಸರಕಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಕೂಡಲೇ ಶ್ರಮಿಕ ವರ್ಗ ವಿಶ್ವಕರ್ಮ ಜನಾಂಗಕ್ಕೂ ವಿಶೇಷ ಪ್ಯಾಕೇಜ್ ವಿಸ್ತರಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ನಡೆಸಲಾಗುವುದೆಂದು ಅವರು ಗಾಯತ್ರಿ ಚಂದ್ರಶೇಖರ ಹೇಳಿದರು.ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಉಪಾಧ್ಯಕ್ಷ ಸಿದ್ದರೂಢ ಬಡಿಗೇರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ರಂಗಪ್ಪ ಪತರ್, ಖಜಾಂಚಿ ವೇಣುಗೋಪಾಲಚಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.