ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ 3.68 ಕೋಟಿ ಕಾಣಿಕೆ ಸಂಗ್ರಹ ವರದಿ-ಮಲ್ಲನಗೌಡ ಪಾಟೀಲ
ಉಗರಗೋಳ 13: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ರೂ 3.68 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಪ್ರತಿಬಾರಿ ಎಣಿಕೆ ನಡೆದಾಗ ರೂ. 1 ಕೋಟಿಯಿಂದ ರೂ. 1.5 ಕೋಟಿಯವರೆಗೆ ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ ರೂ. 4 ಕೋಟಿ ಸಮೀಪದವರೆಗೆ ಸಂಗ್ರಹವಾಗಿದ್ದು ದಾಖಲೆಯಾಗಿದೆ. 2024ರ ಡಿಸೆಂಬರ್ 14ರಿಂದ 2025ರ ಮಾರ್ಚ್ 12ರವರೆಗೆ(89 ದಿನ) ಯಲ್ಲಮ್ಮ ಗುಡ್ಡಕ್ಕೆ ಆಗಮಿಸಿದ ಭಕ್ತರು, ಯಲ್ಲಮ್ಮ ದೇವಸ್ಥಾನ ಮತ್ತು ಇತರೆ ಪರಿವಾರದ ದೇವಸ್ಥಾನಗಳ ಹುಂಡಿಗಳಲ್ಲಿ ರೂ. 3.40 ಕೋಟಿ ನಗದು,, ರೂ. 20.82 ಲಕ್ಷ ಮೌಲ್ಯದ ಚಿನ್ನಾಭರಣ, ರೂ. 6.39 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಕಿ ಭಕ್ತಿ ಅರ್ಿಸಿದ್ದಾರೆ. ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಯಲ್ಲಿ ಯಲ್ಲಮ್ಮನ ಸನ್ನಿಧಿಯು ಬೃಹತ್ ಜಾತ್ರೆಗಳಿಗೆ ಸಾಕ್ಷಿಯಾಗುತ್ತದೆ. ಈ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಕಾಣಿಕೆಯೂ ಅಮ್ಮನ ಸನ್ನಿಧಿಗೆ ಹರಿದುಬರುತ್ತದೆ. ಆದರೆ, ಕಳೆದ ವರ್ಷ ಭೀಕರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಬಂದಿರಲಿಲ್ಲ. ಹಾಗಾಗಿ ನೀರೀಕ್ಷೆಯಂತೆ ಕಾಣಿಕೆಯೂ ಬಂದಿರಲಿಲ್ಲ. ಈ ಸಲ ಮುಂಗಾರು ಹಂಗಾಮಿನಲ್ಲಿ ಸಮೃದ್ಧ ಮಳೆಯಾಗಿ ಉತ್ತಮ ಫಸಲು ಬಂದಿದ್ದರಿಂದ ರೈತರು ಸೇರಿ ಎಲ್ಲ ವರ್ಗದ ಜನರು ಸಂಭ್ರಮದಿಂದ ಇದ್ದಾರೆ. ಹಾಗಾಗಿ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಯಲ್ಲಿ ನೀರೀಕ್ಷೆಗೂ ಮೀರಿ ಭಕ್ತರು ಬಂದರು. ಇದರೊಂದಿಗೆ ಉಳಿದ ದಿನಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಿಗೆಯೇ ಇತ್ತು. ಹಾಗಾಗಿ ಕಾಣಿಕೆ ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ. ‘ದೇವಸ್ಥಾನಗಳಲ್ಲಿ ಇರುವ ಹುಂಡಿಯ ಹಣವನ್ನು ದೇವಸ್ಥಾನದ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ. ಅಭಿವೃದ್ಧಿ ಕೆಲಸಕ್ಕೆ, ಭಕ್ತರಿಗೆ ಸೌಕರ್ಯ ಕಲ್ಪಿಸಲು ಅದನ್ನು ಬಳಸಲಾಗುವುದು’ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದ್ದಾರೆ. 'ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಕ್ರಮ ವಹಿಸಿದ್ದೇವೆ. ಭಕ್ತರಿಗೆ ಹೆಚ್ಚೆಚ್ಚು ಸೌಕರ್ಯ ಒದಗಿಸಿ ಗುಡ್ಡದ ಆದಾಯ ಇನ್ನಷ್ಟು ಹೆಚ್ಚಿಸಲಾಗುವುದು' ಎಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ. ವಿದೇಶಿ ಕರೆನ್ಸಿಗಳೂ ಇವೆ: ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರು ದೇವಸ್ಥಾನದಲ್ಲಿ ಇರಿಸಿದ ಹುಂಡಿಗೆ ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಹಣ, ಒಡವೆ ಹಾಕಿ ಭಕ್ತಿ ಮೆರೆಯುತ್ತಾರೆ. ವಿಶೇಷವೆಂದರೆ ಈ ಹುಂಡಿಯಲ್ಲಿ ಭಾರತ ಮಾತ್ರವಲ್ಲದೆ, ಅಮೆರಿಕ, ನೆದರ್‌ಲ್ಯಾಂಡ್ ಮೊದಲಾದ ದೇಶಗಳ ಕರೆನ್ಸಿಗಳೂ ಪತ್ತೆಯಾಗಿವೆ. ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಿಬ್ಬಂದಿ, ಮುಜರಾಯಿ ಇಲಾಖೆ ಅಧಿಕಾರಿಗಳು, ಸವದತ್ತಿ ಕಚೇರಿ ಅಧಿಕಾರಿಗಳು, ಸವದತ್ತಿ ಪೊಲೀಸ್ ಠಾಣೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಪ್ರಕ್ರಿಯೆ ನಡೆಯಿತು. ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಮುಜರಾಯಿ ಬಾಳೇಶ ಅಬ್ಬಾಯಿ, ದೇವಸ್ಥಾನ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಡಿ ಆರ್ ಚವ್ಹಾಣ, ಅಣ್ಣಪೂರ್ಣಾ ಬ್ಯಾಹಟ್ಟಿ, ಎಎಸ್‌ಐ ಬಿ ಆರ್ ಸಣ್ಣಮಳಗೆ, ಕೆನರಾ ಭ್ಯಾಂಕ್ ಮ್ಯಾನೇಜರ ಚಾನಾಕ್ಷ್ಯ, ಅಲ್ಲಮಪ್ರಭು ಪ್ರಭುನವರ, ಆರ್ ಎಚ್ ಸವದತ್ತಿ, ರಾಜು ಬೆಳವಡಿ, ಪ್ರಭು ಹಂಜಗಿ, ಡಿ ಡಿ ನಾಗನಗೌಡರ, ಯೋಗೇಶ ಶೀರಾಳೆ, ವ್ಹಿ ಆರ್ ನಿಲಗುಂದ, ಮಲ್ಲಯ್ಯ ತೋರಗಲ್ಲವ್ಮಠ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು. ಈಗ ವಿವಿಧ ಯೋಜನೆಗಳಡಿ ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಅನುದಾನ ಬರುತ್ತಿದೆ. ಜತೆಗೆ, ಭಕ್ತರ ಕಾಣಿಕೆ ಪ್ರಮಾಣವೂ ಹೆಚ್ಚಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಗುಡ್ಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಭಕ್ತರ ಆಗ್ರಹ.