ಕೆ. ನಾರಾಯಣರೆಂಬ ದಾಡಸಿ ಆಸಾಮಿ ಬೆಳಗಾವಿಯ ಎಸ್.ಪಿ. ಆಗಿ ಬಂದದ್ದು ಕನ್ನಡಿಗರ ಪಾಲಿಗೆ ಹೆಮ್ಮೆ ವಿಷಯವೆನ್ನಬಹುದು. 1985 ರ ರಾಜ್ಯೋತ್ಸವ ಮೆರವಣಿಗೆಯು ಬಲು ಜೋರಾಗಿ ನಡೆುತು. ಆಗ ಈ ಪುಂಡ ಮರಾಠಿಗರಿಗೆ ಇದನ್ನು ತಡೆದುಕೊಳ್ಳಲು ಆಗಲಿಲ್ಲ. ಅಲ್ಲಲ್ಲಿ ಕಲ್ಲು ತೂರಾಟ, ಕನ್ನಡ ಕಾರ್ಯಕರ್ತರು ಒಬ್ಬರೇ ಸಿಕ್ಕರೆ ಹೊಡೆಯುವುದು ಹೀಗೆ ಒಂದಿಲ್ಲೊಂದು ಕಿತಾಪತಿ ಮಾಡುತ್ತಾ ಇದ್ದರು. 1986 ಜನೇವರಿ 17 ರಂದು ಪಾಟೀಲ ಗಲ್ಲಿಯಲ್ಲಿದ್ದ ಎಂ. ಬಿ. ದೇಸಾಯಿಯವರ ಲೋಕದರ್ಶನ ದಿನ ಪತ್ರಿಕೆಯ ಕಾರ್ಯಾಲಯದ ಮೇಲೆ ಪೆಟ್ರೋಲ ಬಾಂಬ್ ಎಸೆದರು. ಆಗ ಪುಣ್ಯಕ್ಕೆ ಯಾರಿಗೂ ಜೀವಹಾನಿ ಆಗಲಿಲ್ಲ. ಆದರೆ ಕಚೇರಿಯ ಒಂದು ಭಾಗದ ಗೋಡೆ ಬಿದ್ದು ಭಾರೀ ಹಾನಿಯಾಯಿತು. ಪ್ರತಿನಿತ್ಯ ಒಂದಿಲ್ಲೊಂದು ಸೀಮಾ ಕುರಿತು ಉದ್ರೇಕಗೊಳಿಸುವ ಸುದ್ದಿಯನ್ನು ಪ್ರಕಟಿಸುತ್ತಿದ್ದ ತರುಣ ಭಾರತ ಪತ್ರಿಕೆಗೆ ಕೂಡಲೆ ಗುದ್ದು ನೀಡುತ್ತಿದ್ದ ನಾಡೋಜ ಪತ್ರಿಕೆಯ ವಾಹನಕ್ಕೆ ಬೆಂಕಿ ಹಚ್ಚಿದರು. ಅಷ್ಟೇ ಅಲ್ಲದೆ ಕಾರ್ಯಾಲಯದಮೇಲೆ, ಮನೆಯಮೇಲೆ ಮೇಲಿಂದ ಮೇಲೆ ಕಲ್ಲು ತೂರಾಟ ಇದ್ದೇ ಇತ್ತು. ಮತ್ತೊಂದು ಕನ್ನಡಿಗರ ಖಾಸ ಪತ್ರಿಕೆ ಕನ್ನಡಮ್ಮ ಕೂಡಾ ಮರಾಠರ ಕಲ್ಲು ತೂರಾಟಕ್ಕೆ ಬಲಿ ಆಗುತ್ತಾ ಇತ್ತು. ಇಂತಹ ಸಮಯದಲ್ಲಿ ಎಸ್.ಪಿ. ಕೆ. ನಾರಾಯಣ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳ ಕೆಲವೇ ಕೆಲವು ಪ್ರಸಂಗಗಳನ್ನು ಮೆಲುಕು ಹಾಕೋಣ.
1986ರಲ್ಲಿ ಮರಾಠರ 'ಸೀಮಾ ಲಡಾ' ಚಳವಳಿಯ ಪ್ರಸಂಗದಲ್ಲಿ ಕೊಲ್ಲಾಪೂರದಲ್ಲಿ ಸೀಮಾ ಪರಿಷತ್ತು ನಡೆದಾಗ ಬಾಳಾಠಾಕ್ರೆ ಹಾಗೂ ಶರದ ಪವಾರರಲ್ಲಿ ಭಿನ್ನಾಭಿಪ್ರಾಯವುಂಟಾಗಿ ಈ ಪ್ರಸಂಗದಲ್ಲಿ ತಮ್ಮ ತಮ್ಮ ವರ್ಚಸ್ಸನ್ನು ತೋರಿಸುವುದಕ್ಕಾಗಿ ಹೆಣಗಾಡುವ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಗಣ್ಯರಾದ ಎಸ್. ಎಂ. ಜೋಶಿಯವರು ಇಬ್ಬರಿಗೂ (ಠಾಕ್ರೆ ಹಾಗೂ ಶರದಗೆ) ಬುದ್ಧಿ ಹೇಳಿ ಒಕ್ಕಟ್ಟಾಗಿ ಹೋರಾಟಕ್ಕೆ ಕರೆ ನೀಡಿದರು. ಇದರ ಫಲವಾಗಿ ಸೀಮಾಲಡಾ ಹೋರಾಟದ ಅಧ್ಯಕ್ಷತೆ ಎಸ್. ಎಂ. ಜೋಶಿಗೆ ಒಪ್ಪಿಸಲಾಯಿತು. ಕಾರ್ಯದರ್ಶಿಯನ್ನಾಗಿ ಶರದ ಪವಾರರನ್ನಾಗಿ ಮಾಡಿದರು. ಇದರಿಂದ ರಾಜಕೀಯದಲ್ಲಿ ಸ್ವಲ್ಪು ಹಿನ್ನಡೆಯಾಗಿದ್ದ ಪವಾರ ಈ ಮೂಲಕ ಮಿಂಚಲು ತಂತ್ರ ನಿರ್ಮಿಸಿ ಬೆಳಗಾವಿಯ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಜೂನ 1, 1986 ರಂದು ಚಳವಳಿ ನಡೆಸಲು ಠರಾುಸಿದರು. ಅಸಂಖ್ಯಾತ ಮರಾಠರು ಬೆಳಗಾವಿಗೆ ಬರಲು ತಯಾರಾದರು, ನಿಪ್ಪಾಣಿ, ಸಂಕೇಶ್ವರ, ಭಾಗದ ಜನರಲ್ಲಿ ವಿದ್ಯುತ್ ಸಂಚಾರವಾಯಿತು. ಕಲ್ಲು ತೂರಾಟ, ಬೆಂಕಿ ಹಚ್ಚುವುದು ನಡೆುತು. ಕನ್ನಡ ಶಾಲೆಗೆ ಬೆಂಕಿ ಹಚ್ಚುವುದು, ಅಲ್ಲದೆ ಹಿರಿಯ ಹಾಗೂ ಕನ್ನಡ ಅಭಿಮಾನಿಗಳ ಮನೆಗೆ ಬೆಂಕಿ ಹಚ್ಚುವ, ಕಲ್ಲು ತೂರುವ ಕಾರ್ಯವನ್ನು ಪುಂಡ ಮರಾಠರು ನಡೆಸಿದರು. ಆ ಸಮಯದಲ್ಲಿ ಮಹಾದೇವಪ್ಪ ನಷ್ಟೆ ಅವರ ಮನೆಗೆ, ಕನ್ನಡ ಅಂಗಡಿಗಳ ಮುಂದೆ ನಿಲ್ಲಿಸಿದ್ದ (ಕನ್ನಡ ಬೋರ್ಡ ಬರೆದಿದ್ದ) ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಇದೇ ಸಂದರ್ಭ ಉಪಯೋಗಿಸಿಕೊಂಡು ಕನ್ನಡಿಗರ ಆಸ್ತಿ-ಪಾಸ್ತಿ ಲೂಟಿ ಮಾಡಿದರು. ಈ ಗಾಳಿ ಬೆಳಗಾವಿಯಲ್ಲಿ ಕೂಡಾ ಜೋರು ಆಯಿತು. ನಮ್ಮ ಬೆಳಗಾವಿ ಎ.ಪಿ.ಎಂ.ಸಿ. ಭಾಗದಲ್ಲಿ ದಾಂದಲೆ ಬಲು ಜೋರು ನಡೆುತು. ಬಿ. ಆಯ್. ಪಾಟೀಲರಂಥ ಮರಾಠಿ (ಶಾಸಕರು) ಮುಖಂಡರು ದಾಂದಲೆ ಎಬ್ಬಿಸಿದ್ದರು. ಆಗ ನಾನು (ಸಿ. ಕೆ. ಜೋರಾಪೂರ) ಎ.ಪಿ.ಎಂ.ಸಿ ಕ್ವಾರ್ಟರ್ಸದಲ್ಲಿ ಇದ್ದೆ. ಕೆಲಸ ಮಾತ್ರ ಇಂಜನೀಯರಿಂಗ್ ಶೆಲ್‌ದಲ್ಲಿ ಇತ್ತು. ನನಗೂ ಈ ಮರಾಠಾ ಲೀಡರಗಳಿಗೂ ಅಷ್ಟೊಂದು ಪರಿಚಯ ಇರಲಿಲ್ಲ. ದಾಂದಲೇ ಜೋರು ಆದಾಗ ಪೊಲೀಸರಿಗೆ ಸುದ್ದಿ ಮುಟ್ಟಿ ಡಿ.ವಾಯ್.ಎಸ್.ಪಿ. ಆಲೂರ ಎಂಬ ಪೊಲೀಸ ಅಧಿಕಾರಿ ಬಂದರು. ನಾನು ಎಲ್ಲ ವಿವರಣೆಯನ್ನು ಬಿಂದಾಸ ಆಗಿ ಹೇಳಿದೆ. ಪೊಲೀಸರು ಯಾವ ಪ್ರಮುಖ, ಶಾಸಕ ಎನ್ನದೆ ಕಟ್ಟರವಾದಿಗಳಾದ ದೊಡ್ಡ ದೊಡ್ಡ ವ್ಯಾಪಾರಿಗಳನ್ನು ಕೂಡಾ ಥಳಿಸಹತ್ತಿದರು. ಉಳಿದ ಪೊಲೀಸರು ಗುಂಡಾಗಳನ್ನು ಎಳೆದೆಳೆದು ವ್ಯಾನಗಳಲ್ಲಿ ತುಂಬಿಕೊಂಡು ಹೋದರು. ಆಗ ಕೆಲವು ಪುಂಡರು ಓಡುತ್ತ ನನ್ನ ಕಡೆಗೆ ಕೈ ಮಾಡಿ "ಅರೇ ಬಾಡಕೋ ಬಗುತುರೇ ತುಲಾ" ಎಂದು ಚಿರಾಡುತ್ತ ಓಡಿ ಹೋದರು. ಎ.ಪಿ.ಎಂ.ಸಿಯ ಕೆಲವು ವಾಹನಗಳಿಗೆ ಬೆಂಕಿಬಿತ್ತು. ಅದೊಂದು ಯುದ್ಧಭೂಮಿಯಂತೆ ಕಂಡಿತು. 13 ಸುತ್ತು ಅಶ್ರುವಾಯು ಬಳಸಿ ವಾತಾವರಣವನ್ನು ಪೊಲೀಸರು ತಿಳಿಗೊಳಿಸಿದರು. ಎ.ಪಿ.ಎಂ.ಸಿ ಸಿಬ್ಬಂದಿಗಳು ಹೊರಗೆ ಬರಲಿಲ್ಲ.
ಕನ್ನಡದ ಹೋರಾಟಗಾರರನ್ನು ಕೂಡಾ ಕೆ. ನಾರಾಯಣರವರು ಬಂಧಿಸಿದ್ದರು. ಎಂ. ಎಸ್. ಟೋಪಣ್ಣವರ, ಬಾಸೂರ ತಿಪ್ಪೆಸ್ವಾಮಿ, ಅರ್ಜುನ ಹಂಪಿಹೊಳಿ, ಭೀಮಸೇನ ತೊರಗಲ, ರಾಘವೇಂದ್ರ ಜೋಶಿ, ವಿಜಯ ಕಾಮಕರ, ಎಂ. ಬಿ. ದೇಸಾು, ಚನ್ನವೀರ ಕಲ್ಯಾಣಶೆಟ್ಟಿ (ಸೊಲ್ಲಾಪುರ), ವಿನಯ ಢವಳಿ ಮುಂತಾದವರನ್ನು ಬಂಧಿಸಿದ್ದರು. ಬೆಂಗಳೂರಿನಿಂದ ಶಾಸಕರು ಹಾಗೂ ಕನ್ನಡದ ಚಳವಳಿಗಾರರಾದ ಜಿ ನಾರಾಯಣಕುಮಾರರನ್ನು ಬೆಳಗಾವಿಯ ಗಡಿಯಲ್ಲಿಯೇ ಬಂಧಿಸಿ ಗಡಿಪಾರು ಮಾಡಿದರು. ಈ ಸಮಯದಲ್ಲಿ 80 ಕನ್ನಡ ಹೋರಾಟಗಾರರನ್ನು ಬಂಧಿಸಿ ಪೊಲೀಸ ಹೆಡ್‌ಕ್ವಾರ್ಟರ್ಸನಲ್ಲಿ ಇಡಲಾಗಿತ್ತು. ಉಗ್ರ ಮರಾಠಾ ಪುಂಡರನ್ನು ಮುಂಚಿತವಾಗಿಯೇ ಬಂಧಿಸಿ ಹಿಂಡಲಗಾ ಜೇಲಿನಲ್ಲಿ ಇಟ್ಟಿದ್ದರು. ಇಷ್ಟೆಲ್ಲ ತಯಾರಿ ಮಾಡಿದ ಕೆ. ನಾರಾಯಣನಿಗೆ ದ್ರೋಹ ಬಗೆಯುವ ಸ್ವಾರ್ಥ ರಾಜಕಾರಣಿಗಳು ನಮ್ಮ ಕನ್ನಡಿಗರಲ್ಲಿಯೇ ಇದ್ದರು ಎಂಬುದನ್ನು ಮರೆಯಬಾರದು. ಶರದ ಪವಾರ ಹೇಗಾದರೂ ಮಾಡಿ ಈ ಸತ್ಯಾಗ್ರಹದಲ್ಲಿ ಭಾಗವಹಿಸಿಯೇ ತೀರಬೇಕೆಂಬ ಹಟದಿಂದ ಕೂಡಿದವನಾಗಿದ್ದನು. ಅಷ್ಟೇ ಹಟದಿಂದ ಕೆ. ನಾರಾಯಣ ಅವರು ಈ ಶರದನನ್ನು ಬೆಳಗಾವಿಗೆ ಬರದಂತೆ ತಡೆಯಲು 24 ಗಂಟೆ ಜಾಗ್ರತರಾಗಿದ್ದರು. ಚನ್ನಮ್ಮ ವೃತ್ತಕ್ಕೆ ಕೂಡುವ ಎಲ್ಲ ಮಾರ್ಗಗಳಲ್ಲಿ ಪೋಲೀಸರು ಕಬ್ಬಿಣದ ಜಾಳಿಗೆಗಳನ್ನು ಹಾಕಿ ಒಂದು ನರಪಿಳ್ಳೆಯೂ ಸುಳಿಯದಂತೆ ಮಾಡಿದ್ದರು. ಮೊಂಡು ಧೈರ್ಯದ ಮರಾಠರು 'ನಮ್ಮ ಶರದ ಪವಾರ ಬಂದೇ ಬರುತ್ತಾರೆ' ಎಂಬ ಭರವಸೆುಂದ ಸುಮಾರು ಹತ್ತು ಸಾವಿರದಷ್ಟು ಜನರು ಪೊಲೀಸರ ಬ್ಯಾರಿಕೇಡ್‌ಗಳ ಮುಂದೆ ನಿಂತು ಘೋಷಣೆಗಳನ್ನು ಹಾಕುತ್ತ ನಿಂತಿದ್ದರು. ಪವಾರ ಬೆಳಗಾವಿಯನ್ನು ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಅಲ್ಲದೆ ತರುಣ ಭಾರತದಂಥ ನರಿಬುದ್ಧಿಯ ಪತ್ರಿಕೆಗಳು 'ಶರದ ಪವಾರ ಭೂಗತರಾಗಿದ್ದಾರೆ' ಎಂದು ಸುದ್ದಿಗಳನ್ನು ಬಿತ್ತರಿಸಿದ್ದರು. ಹೀಗಾಗಿ ಕೆ. ನಾರಾಯಣ ಅವರಿಗೆ ಈ ಪವಾರ ಬರಲು ಸಾಧ್ಯವೇ ಇಲ್ಲ ಎಂಬ ಅಚಲ ವಿಶ್ವಾಸದಿಂದ ಇದ್ದರು. ಆದರೆ ಮರಾಠರು ಶಿವಾಜಿಯ ಇತಿಹಾಸವನ್ನು ಓದಿದವರು. ಅವನ ಒಂದು ಪೈಸೆಯಾದರೂ ತಂತ್ರಗಾರಿಕೆ ತಮ್ಮಲ್ಲಿ ಇದೆ ಎಂಬ ಹಮ್ಮಿನಿಂದ 3-4 ದಿನಗಳ ಮುಂಚಿತವಾಗಿ ಬೆಳಗಾವಿಯನ್ನು ಪ್ರವೇಶಿಸಿ ಯಾರೂ ಸಂಶಯ ಪಡದಂಥ ಗಣ್ಯವ್ಯಕ್ತಿಗಳಾದ ಕೇಂದ್ರ ಸಚಿವ ಸ್ಥಾನವನ್ನು ಹಲವಾರು ವರ್ಷ ಅನುಭವಿಸುತ್ತಾ ಕರ್ನಾಟಕದ ಅಭಿವೃದ್ಧಿಯನ್ನು ಕಿಂಚಿತ್ತೂ ಮಾಡದೆ ಇದ್ದಂತಹ ಕೇಂದ್ರ ಸಚಿವ ಶಂಕರಾನಂದರ ಮನೆಯಲ್ಲಿ ಪವಾರ ರಾಜಾತಿಥ್ಯ ಪಡೆದಿದ್ದರು. ನಿಗದಿತ ಸಮಯ 10:30ಕ್ಕೆ ಮಿಲನ್ ಹೊಟೇಲ್ ಮಾರ್ಗದ ಕಡೆುಂದ ಭಗವಾ ಪೇಟಾ ಸುತ್ತಿಕೊಂಡು ಮುಖವನ್ನು ಮುಚ್ಚಿಕೊಂಡು ಚನ್ನಮ್ಮ ವೃತ್ತದತ್ತ 'ಬೆಳಗಾಂವ, ನಿಪ್ಪಾಣಿ, ಕಾರವಾರ, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ ಪಾ"ಜೆ' ಎಂಬ ಘೋಷಣೆಗಳೊಂದಿಗೆ ಸುರೇಶ ಕಲ್ಮಾಡಿ ಹಾಗೂ ಕೆಲವೇ ಕೆಲವು ಕಾರ್ಯಕರ್ತರೊಂದಿಗೆ ನುಗ್ಗಿದರು. ಅವರ ದಾರಿಯನ್ನು ಕಾಯುತ್ತ ನಿಂತ ಸಹಸ್ರಾರು ಕಾರ್ಯಕರ್ತರೂ ಘೋಷಣೆಗಳೊಂದಿಗೆ ಅವರೊಂದಿಗೆ ರಭಸದಿಂದ ನುಗ್ಗಿದ್ದರು. ಇದರಿಂದಾಗಿ ಪೊಲೀಸರ ಮಾನವ ಸರಪಳಿ ಮತ್ತು ಕಬ್ಬಿಣದ ಜಾಳಿಗೆಗಳು ಕುಸಿದು ಬಿದ್ದವು. ಈ ಸನ್ನಿವೇಶವನ್ನು ಕ್ಷಣಾರ್ಧದಲ್ಲಿ ಅರ್ಥೈಸಿಕೊಂಡ ಕೆ. ನಾರಾಯಣ ಅವರ ಜನಸಾಗರವನ್ನು ದೂಡಿಕೊಂಡು ಶರದ ಪವಾರನನ್ನು ಹಾಗೂ ಸುರೇಶ ಕಲ್ಮಾಡಿಯನ್ನು ರಟ್ಟೆ ಹಿಡಿದು ಎಳೆಯುತ್ತ ಪೊಲೀಸ ಕಾರಿನಲ್ಲಿ ಹಾಕಿಕೊಂಡು ಪೋಲೀಸ ಹೆಡ್‌ಕ್ವಾರ್ಟರ‌್ಸಗೆ ಒಯ್ಯಲಾಯಿತು. ಕೂಗಾಡುತ್ತಿದ್ದ ಮರಾಠಾ ಪುಂಡರನ್ನು ಲಾಠಿ ಚಾರ್ಜ ಮೂಲಕ ಮಾತನಾಡಿಸಹತ್ತಿದರು. ನರಿ ಬುದ್ಧಿಯ ಮರಾಠರು ಸಾಕಷ್ಟು ಕಲ್ಲುಗಳನ್ನು ಜಮಾ ಮಾಡಿಕೊಂಡಿದ್ದರು. ಶರದ ಪವಾರನನ್ನು ಬಂಧಿಸಿದ ನಂತರ ಕಲ್ಲು ತೂರಾಟ ನಡೆಸಿದರು. ಅಂದು ಸೇರಿದ್ದ ಮರಾಠಿ ಭಾಕ ಪುಂಡರು ಬಹು ಪ್ರಮಾಣದಲ್ಲಿದ್ದರು. ಹಳ್ಳಿಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಲು ಜೀವದ ಹಂಗು ತೊರೆದು ಪತ್ರಿಕೆಗಳಲ್ಲಿ ಮಿಂಚಲು ಬಂದಿದ್ದರು. ಪೊಲೀಸ ಲಾಠಿ ಪ್ರಾರಂಭವಾದ ತಕ್ಷಣ ಗುಂಪು ಗುಂಪಾಗಿ ಕನ್ನಡಗರ ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರುತ್ತ (ಸನಾನ ಹೊಟೀಲಕ್ಕೆ ಕಲ್ಲು ತೂರಿದರೆ, ರಾಘವೇಂದ್ರ ಪಾನಶಾಪ್‌ಗೆ ಬೆಂಕಿ ಹಚ್ಚಿದರು) ಪುಂಡರ ಒಂದು ದೊಡ್ಡ ಗುಂಪು ಹಿಂಡಲಗಾ ಕಡೆಗೆ ಸಾಗುತ್ತಮುಂದೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಟೆಲಿಫೋನ ವಾಯರ್‌ಗಳನ್ನು ಕತ್ತರಿಸಿದಂತೆ ಈ ರೌಡಿಗಳೂ ಕೂಡಾ ಅದೇ ರೀತಿ ಮಾಡತೊಡಗಿದರು, ಗಿಡಗಳನ್ನು ಕಡಿದು ರಸ್ತೆಗೆ ಹಾಕಿ ಸಂಪರ್ಕಕ್ಕೆ ತಡೆ ಒಡ್ಡಿದರು. ಹಿಂಡಲಗಿಯಲ್ಲಿ ಕನ್ನಡ ಶಾಲೆ, ರೇಷ್ಮೆ ಇಲಾಖೆ ಕಛೇರಿ ಹಾಗೂ ಗೋದಾಮಕ್ಕೆ ಬೆಂಕಿ ಹಚ್ಚಿದರು. ಹಿಂಡಲಗಾ ಜೇಲಿನ ಸಿಬ್ಬಂದಿಗಳ ಮನೆಗಳಮೇಲೆ ಕಲ್ಲು ತೂರಿದರು. (ಈ ಸುದ್ದಿಯನ್ನು ಸ್ಥಳಿಯ ಪತ್ರಿಕೆಗಳು ಕಣ್ಣಿಗೆ ಕಟ್ಟುವಂತೆ ಪ್ರಕಟಿಸಿದ್ದರು. ಅದರಲ್ಲಿ ನಾಡೋಜ ಪತ್ರಿಕೆ ಉತ್ಕಟ ಕನ್ನಡ ಅಭಿಮಾನಿ ಪತ್ರಿಕೆ. ಅದು ಎಲ್ಲ ವಿಷಯವನ್ನು ಸವಿಸ್ತಾರವಾಗಿ ಬರೆದಿತ್ತು) ಹಿಂಡಲಗಿ ಸಮಿಪದಲ್ಲಿದ್ದ ಲಕ್ಷ್ಮಿಟೇಕನಲ್ಲಿಯ ಮಾರ್ಕಾಂಡೇಯ ನದಿ ನೀರನ್ನು ಪಂಪ್ ಮಾಡುವ ಪಂಪಿಂಗ್ ಹೌಸನ್ನೆಲ್ಲ ಝಾಪಾಗಳು ಉಧ್ವಂಸಗೊಳಿಸಿದರು. ಅದಕ್ಕೆ ಕಾವಲಿದ್ದ ಪೊಲೀಸ ಜೀಪನ್ನು ಸುಟ್ಟು ಹಾಕಿದರು. ಅಲ್ಲಿಯ ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂಬುದನ್ನು ರಾಘವೇಂದ್ರ ಜೋಶಿಯವರು ಹೇಳುತ್ತ ಪಂಪಿಂಗ್ ಹೌಸ್‌ದ ಕಾವಲಿಗಿದ್ದ ಪೊಲೀಸರು ತಮ್ಮ ಸಮವಸ್ತ್ರಗಳನ್ನೆಲ್ಲ ಕಳಚಿ ಕೇವಲ ಅಂಡರವೇರ್ - ಬನಿಯನ್‌ಮೇಲೆ ದಾಂಧಲೆಖೋರರ ಗುಂಪಿನಲ್ಲಿ ಕರಗಿಹೋಗಿ ಜೀವ ಉಳಿಸಿಕೊಂಡರು ಎಂದು ತಮ್ಮ ಹೋರಾಟದ ಪುಟಗಳಲ್ಲಿ ಬರೆದಿದ್ದಾರೆ.
ಇತ್ತ ಶರದ ಪವಾರ, ಸುರೇಶ ಕಲ್ಮಾಡಿಯವರನ್ನು ಸುರಕ್ಷಿತವಾಗಿ ಕೊಲ್ಲಾಪೂರ ಗಡಿಯವರೆಗೆ ಸಾಗಿಸಲಾುತು. ಆಗ ಎಸ್.ಪಿ. ಕೆ. ನಾರಾಯಣರನ್ನು ಬಾಯಿತುಂಬ ಪೇಪರರವರ ಮುಂದೆ ಹೊಗಳಿದ ಶರದ ಪವಾರ 'ನಿಮ್ಮ ಎಸ್.ಪಿ. ಮಹಾ ಧೈರ್ಯಶಾಲಿ. ಕಲ್ಲು ತೂರಾಟದಲ್ಲಿ ನಾನು ಸತ್ತೇಹೋಗುತ್ತಿದ್ದೆ. ನನ್ನನ್ನು ಬಚಾವ ಮಾಡಿ ಕಾರಿನಲ್ಲಿ ಹಾಕಿ ರಕ್ಷಿಸಿದರು' ಎಂದು ಹೇಳಿ ಕೊಲ್ಲಾಪೂರದಲ್ಲಿ ಮಾಧ್ಯಮದವರ ಎದುರಿಗೆ 'ಕರ್ನಾಟಕ ಪೋಲೀಸರು ಬಲು ಒರಟರು. ತಮ್ಮನ್ನು ಹಾಗೂ ನಮ್ಮ ಮರಾಠಿ ಕಾರ್ಯಕರ್ತರನ್ನು ಅಮಾನುಷವಾಗಿ ನಡೆಸಿಕೊಂಡರು' ಎಂದು ಬೊಗಳೆ ಬಿಟ್ಟರು. ಇಲ್ಲಿ ಇನ್ನೊಂದು ವಿಷಯವನ್ನು ಹೇಳಲೇಬೇಕು. ಸತ್ಯಾಗ್ರಹದ ಅಧ್ಯಕ್ಷರಾದ ಎಸ್. ಎಂ. ಜೋಶಿ ಶರದ ಪವಾರರಂತೆ ಯಾವ ನಾಟಕ ಆಡದೆ ನೇರವಾಗಿ ಜೂನ 1 ರಂದೇ ಬೆಳಗಾವಿಯನ್ನು ಪ್ರವೇಶಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಪೊಲೀಸರು ಬಂಧಿಸಿ ಹಿಡಕಲ್ ಡ್ಯಾಮ ಹತ್ತಿರದ ಹುನ್ನೂರು ಪ್ರವಾಸಿ ಮಂದಿರದಲ್ಲಿ ಕೂಡಿಹಾಕಿದರು. ನಂತರ ಸುರೇಶ ಕಲ್ಮಾಡಿಯನ್ನು ಮತ್ತು ಶರದ ಪವಾರರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮೂವರಿಗೂ ಒಳ್ಳೆಯ ಭೋಜನ ಹಾಕಿ ಕೊಲ್ಲಾಪೂರಕ್ಕೆ ಕಳಿಸಿದರು. ಅದಕ್ಕಿಂತ ಮುಂಚೆ ನಮ್ಮ ಬೆಳಗಾ"ಯಲ್ಲಿಯ ಪತ್ರಿಕೆಯವರ ಮುಂದೆ ಸುರೇಶ ಕಲ್ಮಾಡಿ 'ನಾನು ಕನ್ನಡಿಗ, ಆದರೆ ಬೆಳಗಾವಿಯು ನ್ಯಾಯಯುತವಾಗಿ ಮಹಾರಾಷ್ಟ್ರಕ್ಕೆ ಬರಬೇಕೆಂಬ ಅಭಿಪ್ರಾಯವುಳ್ಳವ. ಅಂತೆಯೇ ಈ ಚಳವಳಿಯಲ್ಲಿ ಪಾಲ್ಗೊಂಡಿದ್ದೇನೆ' ಎಂದು ಹೇಳಿದ್ದು ಎಷ್ಟು ನಾಚಿಕೆಗೆಡಿತನ ಕೆಲಸ!
ಕೆ. ನಾರಯಣರರು ರಕ್ಕಸಕೊಪ್ಪ ನೀರಿನ ಪೈಪ ಒಡೆದವರನ್ನು ನಿಯಂತ್ರಿಸಿದ್ದು, ನಿಪ್ಪಾಣಿಯಲ್ಲಿಯ ವೀರಕುಮಾರ ಪಾಟೀಲರನ್ನು ತಂಡಾ ಮಾಡಿದ ಪ್ರಸಂಗಗಳನ್ನು ಮತ್ತೊಮ್ಮೆ ವಿವರಿಸುವೆ.
ಈ ರೀತಿ ಕ್ರಮ ಕೈಕೊಳ್ಳದಿದ್ದರೆ ಪುಂಡರನ್ನು ಸದೆ ಬಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಇಂಥ ಅಧಿಕಾರಿಗಳು ನಮ್ಮ ಬೆಳಗಾವಿಗೆ ಬಂದು ಹೋಗಿದ್ದರಿಂದಲೇ ನಮ್ಮ ಸ್ಥಿತಿ ಚನ್ನಾಗಿದೆ. ನಮ್ಮ ಹೋರಾಟಗಾರರು ಚಳುವಳಿಗಾರರು ಪೇಪರ ಹೇಳಿಕೆ ಕೊಡುತ್ತಾ ನಾನು ಅಷ್ಟು ಮಾಡಿದೆ, ಇಷ್ಟು ಮಾಡಿದೆ ಎಂದು ಹೇಳುವದನ್ನು ನೋಡಿದಾಗ ಮನಸ್ಸು ರೋಸಿ ಹೋಗುತ್ತದೆ.
ಗಡಿನಾಡ ಬೆಳಗಾವಿಗೆ ಮರಾಠರ ಉಪಟಳ ಅ್ಟಷ್ಟಲ್ಲ. ಆಗಾಗ ಕೆಲವು ಪೋಲೀಸ ಅಧಿಕಾರಿಗಳು ಬಂದು ಅವರನ್ನು ನಿಯಂತ್ರಿಸಿದ್ದಾರೆ. ಅವರಲ್ಲಿ ನೆನಪಿಡುವಂಥವರೆಂದರೆ ಪಿ. ಜೆ. ಲೂುಸ್, ಕಾರ್ತಿಕೇಯನ್, ನಂತರದಲ್ಲಿ ಬಂದು ಎಲ್ಲ ದಾಖಲೆಗಳನ್ನು ಮುರಿದು ಮರಾಠರ ಅತ್ಯಂತ ವಿಷಪೂರಿತ ಹಲ್ಲುಗಳನ್ನು ಕಿತ್ತು ಹಾಕಿದವರು ಕೆ. ನಾರಾಯಣ. ಇದರಿಂದಾಗಿ ಬೆಳಗಾ" ಕನ್ನಡ ಜನತೆ ಶ್ರೀಮನ್‌ನಾರಾಯಣನನ್ನು ನೆನೆಯದಿದ್ದರೂ ಈ ಕೆ. ನಾರಾಯಣನನ್ನು ಜ್ಞಾಪಿಸಿಕೊಳ್ಳಲೇಬೇಕು.
* * *