ಬಂಡಿಪುರ, ಆ 5 ದೇಶದ ಹುಲಿ ವಾಸ ಸ್ಥಾನಗಳ ರಕ್ಷಣೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವಿಶೇಷ ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಪ್ರಸಿದ್ಧ ಚಾಮರಾಜನಗರ ಜಿಲ್ಲೆಯ ಬಂಡಿಪುರ ಹುಲಿ ಸಫಾರಿ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಬಂಡಿಪುರ ಹುಲಿ ಸಂರಕ್ಷಿತ ಅಭಯಾರಣ್ಯದಿಂದ 10 ಕಿಲೋ ಮೀಟರ್ ದೂರದ ಮೇಲುಕಾಮನಹಳ್ಳಿಗೆ ಹುಲಿ ಸಫಾರಿಯನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹುಲಿ ಸಫಾರಿಗೆ ಆಗಮಿಸುವ ಪ್ರವಾಸಿಗರು, ವನ್ಯಜೀವಿ ಪ್ರಿಯರು ಇನ್ನು ಮುಂದೆ ಮೇಲುಕಾಮನಹಳ್ಳಿಗೆ ಆಗಮಿಸಬೇಕು. ಅಲ್ಲಿಂದಲೇ ಕಾಡಿನ ಸೌಂದರ್ಯ ಹಾಗೂ ವನ್ಯಜೀವಿಗಳ ವೀಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.
ಈಗಿರುವ ಬಂಡಿಪುರ ಸಫಾರಿ ಕೇಂದ್ರ ಪ್ರದೇಶದಲ್ಲಿ ಜಿಂಕೆ, ಕಾಡೆಮ್ಮೆಗಳ ಹಿಂಡು, ಕಾಡಾನೆ, ಚಿರತೆ, ಹುಲಿ, ಸೇರಿ ಅನೇಕ ಬಗೆಯ ವನ್ಯಜೀವಿಗಳು ಮುಕ್ತವಾಗಿ ಸಂಚರಿಸುತ್ತಿವೆ. ಇವುಗಳ ಮುಕ್ತ ಸಂಚಾರಕ್ಕೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರವಿಕುಮಾರ್ ಹೇಳಿದರು.