ವಿಜಯಪುರ 21: ಧಾರ್ಮಿಕ ಆಚರಣೆಗಳನ್ನು ಮಾಡುವುದು ಧಾರ್ಮಿಕ ಹಕ್ಕು, ಪರೀಕ್ಷೆ ನೆಪದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಪವಿತ್ರ ಜನಿವಾರ ತೆಗೆಯಿಸಲು ಹೇಳಿರುವುದು ನೋವಿನ ಸಂಗತಿ, ಇದು ವಿದ್ಯಾರ್ಥಿಗಳ ಮನಸ್ಸಿಗೂ ಆಘಾತ ತಂದಿದೆ, ಹೀಗಾಗಿ ವಿದ್ಯಾರ್ಥಿ ಆಘಾತದಿಂದ ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲ, ಅವರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೂ ಸಹ ಧಕ್ಕೆಯಾಗಲಿದೆ.
ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ಲೋಹದ ಸರ ಧರಿಸಬಾರದು ಎಂಬ ಉಲ್ಲೇಖವಿದೆ, ಆದರೆ ಜನಿವಾರ ಧರಿಸಬಾರದು ಎಂಬ ಯಾವ ಉಲ್ಲೇಖವೂ ಇಲ್ಲ, ಅಧಿಕಾರಿಗಳು ಕೇವಲ ಒಂದು ಸಮುದಾಯ ಧಾರ್ಮಿಕ ಸಂಕೇತವನ್ನು ತೆಗೆದುಹಾಕಲು ಹೇಳಿ ಧರ್ಮಕ್ಕೂ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಯುವ ಮುಖಂಡ ಉದ್ಯಮಿಯಾದ ಗೋವಿಂದ ಜೋಶಿ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.