ಬೆಂಗಳೂರು, ಜೂ.8,ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ರಾಜ್ಯದ ಧಾರ್ಮಿಕ ಕೇಂದ್ರಗಳು ತೆರೆಯುತ್ತಿದ್ದು, ಪ್ರಸಿದ್ಧ ದೇವಾಲಯಗಳಲ್ಲಿ ಭಕ್ತರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದ ಮಾರ್ಗಸೂಚಿಯಂತೆ ದರ್ಶನಕ್ಕಷ್ಟೆ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಪೂಜೆ, ಸೇವೆ ಆರತಿ, ಪ್ರಸಾದ ತೀರ್ಥಕ್ಕೆ ನಿರ್ಬಂಧ ವಿಧಿಸಲಾಗಿದೆ.ಅದೇ ರೀತಿ ಕೆಲವು ಕಡೆಗಳಲ್ಲಿ ಚರ್ಚ್ ಗಳು, ಮಸೀದಿಗಳು ತೆರೆದು ಪ್ರಾರ್ಥನೆ ಸಲ್ಲಿಸಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಇನ್ನೂ ಮುಂಜಾಗೃತಾ ಕ್ರಮಗಳನ್ನು ಕೈಗೊಂಡ ಬಳಿಕ ತೆರೆಯಲು ನಿರ್ಧರಿಸಲಾಗಿವೆ.ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮತ್ತು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಬಾಗಿಲು ತೆರೆದಿದ್ದು, ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡುಬಂತು.ಚಾಮರಾಜನಗರ ಜಿಲ್ಲೆಯ ಮಹದೇಶ್ವರ ದೇಗುಲದಲ್ಲಿ ಮೊದಲ ದಿನವೇ ನೂರಾರು ಭಕ್ತರು ಆಗಮಿಸಿ ಮಾದೇಶ್ವರನ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡುಬಂತು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್, ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ನೀಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಇಲ್ಲದವರಿಗೆ ಕಡಿಮೆ ದರದಲ್ಲಿ ಪ್ರಾಧಿಕಾರದ ವತಿಯಿಂದಲೇ ಮಾಸ್ಕ್ ವಿತರಿಸಲಾಗುತ್ತಿದೆ. ವಿಶ್ವ ವಿಖ್ಯಾತ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಇಂದಿನಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದ್ದು, ಬೆಳಿಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ.
ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಭ ದೇವಾಲಯದ ಬಾಗಿಲು ತೆರೆಯಯಾಗಿದ್ದು, ದೇವಾಲಯದಲ್ಲಿ ಸಾಮಾಜಿಕ ಅಂತರಕ್ಕಾಗಿ ಸಾಲಿನಲ್ಲಿ ಗುರುತು ಹಾಕಲಾಗಿದೆ. ದೇವಾಲಯದ ಪ್ರಾಂಗಣದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ. ಕೇಂದ್ರದ ಮಾರ್ಗಸೂಚಿಯಂತೆ ದರ್ಶನಕ್ಕಷ್ಟೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಪೂಜೆ, ಸೇವೆ ಆರತಿ, ಪ್ರಸಾದ ತೀರ್ಥಕ್ಕೆ ನಿರ್ಬಂಧ ವಿಧಿಸಲಾಗಿದೆ.ಬಾಗಲಕೋಟೆ ಜಿಲ್ಲೆ ಐತಿಹಾಸಿಕ ಕೂಡಲ ಸಂಗಮದಲ್ಲಿ ಸಂಗಮನಾಥ ದೇವಾಲಯದ ಬಾಗಿಲನ್ನು ತೆರೆಯಲಾಗಿದ್ದು, ಈಗಾಗಲೇ ದರ್ಶನಕ್ಕೆ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಇನ್ನೂಬಾಗಿಲು ತೆರೆದಿಲ್ಲ.