ವೈರಸ್‌ಗಳಿಗೆ ಧರ್ಮದ ಲೇಪನ ಹಚ್ಚಿ ನೀಚ ರಾಜಕೀಯ: ವೆಲ್ಫೇರ್ ಪಾರ್ಟಿ

ಬೆಂಗಳೂರು, ಮೇ 20,ಮುಖ್ಯಮಂತ್ರಿಯವರ ಕಚೇರಿಯಿಂದ ಪ್ರತಿದಿನ ಆಗಾಗ ಹೊರಬರುವ ಕೊರೊನ ಬುಲೆಟಿನ್ ಮಾಹಿತಿಯಲ್ಲಿ  ಕೆಳಗೆ ತಬ್ಲೀಘಿ ಜಮಾತಿನಲ್ಲಿ ಭಾಗವಹಿಸಿದವರಿಗೆ ಸೂಚನೆ ಎಂಬ ಬರಹವು ಈಗಲೂ ಕಾಣುತ್ತಿದೆ, ಅದನ್ನು ಅಳಿಸದೇ ಉಳಿಸಿಕೊಂಡಿರುವ ಗುಪ್ತ ಅಜೆಂಡಾ ಏನಿರಬಹುದು ?ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ  ತಾಹಿರ್ ಹುಸೇನ್ ಪ್ರಶ್ನಿಸಿದ್ದಾರೆ.ಜನವರಿ 30ಕ್ಕೆ ಕೊರೊನ ಪ್ರಥಮ ಪ್ರಕರಣ ಭಾರತದಲ್ಲಿ ಕಾಣಿಸಿಕೊಂಡಿರುವುದು. ಫೆಬ್ರವರಿ ಕೊನೆಯ ವಾರದಲ್ಲಿ "ನಮಸ್ತೇ ಟ್ರಂಪ್" ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಲಕ್ಷಾಂತರ ಮಂದಿ ಸೇರಿ ನಡೆದಿರುವುದು. ಮಾರ್ಚ್ ಮೊದಲ ವಾರದಲ್ಲಿ ಉತ್ತರಪ್ರದೇಶದ ಮಂದಿರದಲ್ಲಿ ಉತ್ಸವ ನಡೆದಿದೆ. ಕನ್ನಿಕಾ ಕಪೂರ್ ಆಗಮನವೂ ಇದೇ ಸಂಧರ್ಭದಲ್ಲಿ ಜರಗಿದೆ.

ಫೆಬ್ರವರಿ ಮೊದಲ ವಾರದಲ್ಲೇ ರಾಹುಲ್ ಗಾಂಧಿಯವರು ಕೇಂದ್ರ ಸರಕಾರಕ್ಕೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಕೇಂದ್ರ ಬಿಜೆಪಿ ಸರಕಾರ ಅವರನ್ನು ಪಪ್ಪುವಿನ ಅರ್ಥವಿಲ್ಲದ ಸಲಹೆ ಎಂದು ವ್ಯಂಗ್ಯ ಮಾಡಿ ತಳ್ಳಿಹಾಕಿತು. ಆದರೆ ನಿಝಾಮುದ್ದೀನಲ್ಲಿ ತಬ್ಲೀಗ್ ಜಮಾತ್ ಕಾರ್ಯಕ್ರಮ ನಡೆದಿರುವುದು ಮಾರ್ಚ್ ಎರಡನೇ ವಾರದಲ್ಲಿ, ಈ ವಾಸ್ತವಿಕತೆ ಗೊತ್ತಿದ್ದೂ ತಮ್ಮ ಬೇಜಾವಾಬ್ದಾರಿತನದಿಂದ ಆದಂತಹ ಈ ಮಹಾ ಕೊಡುಗೆಯನ್ನು ಒಂದು ಸಮುದಾಯದ ತಲೆ ಮೇಲೆ ಹಾಕಿ ರಾಜಕೀಯ ಬೇಳೆ ಬೇಯಿಸಬಹುದು ಎಂಬ ಉದ್ದೇಶದಿಂದ ಈಗಲೂ ಸರಕಾರದ ಅಧೀಕೃತ ಕಚೇರಿಯಿಂದ ಹೊರಡುವ ಕೊರೊನ ಬುಲೆಟಿನ್ ನಿಂದ ಈ "ತಬ್ಲೀಘಿ" ಶಬ್ದ ಅಳಿಸದೇ ಉಳಿಸಿರುವ ಮರ್ಮವಾಗಿದೆ ಎಂದು ಅವರು ದೂರಿದ್ದಾರೆ.ಮುಖ್ಯಮಂತ್ರಿ ಕಚೇರಿಯಿಂದ ಹೊರಡುವ ಈ ಬುಲೆಟಿನ್  ಮುಖ್ಯಮಂತ್ರಿಯವರಿಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೇ ಹೊರಬರುತ್ತಿದೆಯೇ ತಿಳಿಯದು. ಮುಖ್ಯಮಂತ್ರಿ ಯವರು ಇಂತಹದ್ದನ್ನು ಖಂಡಿತಾ ಸಮರ್ಥಿಸಲಾರರು ಎಂಬ ಬಲವಾದ ನಂಬಿಕೆ ಇದೆ. ಒಟ್ಟಿನಲ್ಲಿ ಇದರ ಬಗ್ಗೆ ಕೂಡಲೇ ಸಂಬಂಧಿಸಿದವರು ಜಾಗೃತರಾಗಿ ಇದನ್ನು ಅಳಿಸಿಹಾಕಿ ಯಾವುದೇ ರೋಗಗಳಿಗಾಗಲಿ, ವೈರಸ್‌ಗಳಿಗಾಗಲಿ ಧರ್ಮದ ಲೇಪನ ಹಚ್ಚಿ ನೀಚ ರಾಜಕೀಯ ಮಾಡುವ ಕುಬುದ್ಧಿಯನ್ನು ಸರಕಾರ ನಿಲ್ಲಿಸಬೇಕು ಮತ್ತು ಜನರ ಜೀವನದಲ್ಲಿ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.