ಧರ್ಮವೇ ಬದುಕಿನ ಆಶಾಕಿರಣ: ರಂಭಾಪುರಿಶ್ರೀ
ತಾಳಿಕೋಟಿ 04: ಇಂದು ಎಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ನಮ್ಮ ಬಳಿ ಬದುಕಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳು ಇದ್ದರೂ ನೆಮ್ಮದಿ ಮಾತ್ರ ಇಲ್ಲ ಇದಕ್ಕೆ ಕಾರಣ ನಾವು ಧರ್ಮದ ಮೌಲ್ಯಗಳಿಂದ ವಿಮುಖರಾಗಿರುವುದಾಗಿದೆ. ಧರ್ಮದಿಂದಲೇ ನಮ್ಮ ಬದುಕು,ಸಮಾಜ ಹಾಗೂ ವಿಶ್ವಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ.ಪ್ರಸನ್ನವೀರ ಸೋಮೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟರು.
ತಾಲೂಕಿನ ನಾವದಗಿ ಬ್ರಹನ್ಮಠದ ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡ ಜನ ಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜನ್ಮ ಜನ್ಮಗಳ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ ಅರಿವು ಆದರ್ಶ ಮತ್ತು ಆಚರಣೆಗಳ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು, ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮಾಚರಣೆ ಬಹಳಷ್ಟು ಅವಶ್ಯಕತೆಯಿದೆ. ಧರ್ಮದ ಆದರ್ಶ ಮೀರಿ ನಡೆದರೆ ಮನುಷ್ಯರಿಗೆ ಆತಂಕ ಕಾದಿದೆ ಎಂದರು.
ಆಧುನಿಕ ಜಗತ್ತಿನಲ್ಲಿ ಮನುಷ್ಯನ ಮನಸ್ಸು ಬಹಳ ಚಂಚಲವಾಗಿದೆ, ಅವನ ಜೀವನದಲ್ಲಿ ಸಮಚಿತ್ತತೆ ಎಂಬುದಿಲ್ಲ, ಮನಸ್ಸಿನ ಸ್ಥಿರತೆ ಧರ್ಮದ ಶ್ರೇಷ್ಠ ಮೌಲ್ಯಗಳಿಂದ ಪ್ರಾಪ್ತವಾಗುತ್ತದೆ. ನಾವೆಲ್ಲರೂ ಧರ್ಮವನ್ನು ಬರಿ ಪಾಲಿಸುವುದರ ಜೊತೆಗೆ ಅದನ್ನು ರಕ್ಷಿಸುವ ಕಾರ್ಯವನ್ನೂ ಮಾಡಬೇಕು.ಗುರು ಋಣವನ್ನು ಎಂದೂ ಮರೆಯಬಾರದು, ಗುರು ಭಕ್ತಿ ಇಲ್ಲದೆ ಶಿವ ಭಕ್ತಿ ಇಲ್ಲ, ಗುರುವಿಗಿಂತ ತತ್ವ ತಪಸ್ಸವೂ ಶ್ರೇಷ್ಠವಿಲ್ಲ ಎಂದ ಅವರು ನಾವು ವಿಶ್ವ ಶಾಂತಿಗಾಗಿಯೇ ಡಿ.8 ರಿಂದ ವಿಶ್ವಶಾಂತಿ ಮಹಾಯಜ್ಞೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ವೀರಶೈವ ಲಿಂಗಾಯತ ಮಠ ಮಾನ್ಯರು ಸಮಾಜದಲ್ಲಿ ಶಾಂತಿ, ಸಾಮರಸ್ಯವನ್ನು ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ ಈ ಕಾರ್ಯದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿರುವ ನಾವದಗಿ ಬೃಹನ್ಮಠದ ರಾಜೇಂದ್ರ ಒಡೆಯರ್ ಶಿವಾಚಾರ್ಯರ ಧರ್ಮಸೇವೆ ಶ್ಲಾಘನೀಯವಾದದ್ದು ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಬಾಗೇವಾಡಿಯ ಶಿವಪ್ರಕಾಶ್ ಶಿವಾಚಾರ್ಯರು ಹಾಗೂ ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ 15 ದಿನಗಳ ಕಾಲ ಪ್ರವಚನವನ್ನು ನಡೆಸಿಕೊಟ್ಟ ಪುರಾಣಿಕ ಬಸಯ್ಯ ಶಾಸ್ತ್ರಿಗಳಿಗೆ, ಕಾರ್ಯಕ್ರಮದಲ್ಲಿ ವಿಶೇಷ ಸೇವೆ ಸಲ್ಲಿಸಿದ ಮಹನೀಯರಿಗೆ ಹಾಗೂ ಪತ್ರಕರ್ತರಿಗೆ ಉಭಯ ಜಗದ್ಗುರುಗಳು ಸನ್ಮಾನಿಸಿ ಆಶೀರ್ವದಿಸಿದರು.
ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸಹೋದರ ಸೋಮನಗೌಡ ಪಾಟೀಲ ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದ ಪಾವನ ಸಾನಿಧ್ಯವನ್ನು ಕೇದಾರ ಪೀಠದ ಜಗದ್ಗುರುಗಳಾದ ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದಂಗಳವರು ವಹಿಸಿ ಆಶೀರ್ವಚನ ನೀಡಿದರು.
ಬಸಯ್ಯ ಶಾಸ್ತ್ರಿಗಳು ಪ್ರಾರ್ಥಿಸಿದರು. ಶಿವಯೋಗಿ ಶಿವಾಚಾರ್ಯರು ಸ್ವಾಗತಿಸಿದರು.ಮನಗೂಳಿ ಹಿರೇಮಠದ ಪೂಜ್ಯ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವೀರೇಶ್ ಹಾಗು ಸಂಗಡಿಗರು ಸಂಗೀತ ಸೇವೆ ನೀಡಿದರು. ವೇದಿಕೆಯಲ್ಲಿ ಹಲವಾರು ಪೂಜ್ಯರು, ರಾಜಕೀಯ ಧುರೀಣರು, ಗ್ರಾಮದ ಗಣ್ಯರು, ಹಿರಿಯರು ಇದ್ದರು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಸ್ಥಳಗಳಿಂದ ಆಗಮಿಸಿದ ಶ್ರೀಮಠದ ಅಪಾರ ಭಕ್ತರು ಉಪಸ್ಥಿತರಿದ್ದರು.