ಬೆಂಗಳೂರು, ಮೇ 17,ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಚಾಲಕರಿಗೆ ಐದು ಸಾವಿರ ರೂಪಾಯಿ ನೆರವು ನೀಡುವ ರಾಜ್ಯ ಸರ್ಕಾರದ ಯೋಜನೆಯಲ್ಲಿ ಹಲವಾರು ಷರತ್ತುಗಳನ್ನು ವಿಧಿಸಿದ್ದು, ತಾಂತ್ರಿಕ ಅಡಚಣೆಗಳ ಪರಿಣಾಮ ಶೆ 90 ಕ್ಕೂ ಹೆಚ್ಚು ಅರ್ಹರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟು 7.75 ಲಕ್ಷ ಚಾಲಕರಿಗೆ ತಲಾ ಐದು ಸಾವಿರ ರೂ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದು, ಇದಕ್ಕಾಗಿ 20 ಕೋಟಿ ರೂ ಮಾತ್ರ ನಿಗದಿ ಮಾಡಿದ್ದಾರೆ. ಆದರೆ ಈ ಹಣ 40 ರಿಂದ 50 ಸಾವಿರ ಚಾಲಕರಿಗೆ ಮಾತ್ರ ಪರಿಹಾರ ನೀಡಬಹುದು. ಉಳಿದವರಿಗೆ ಸೌಲಭ್ಯ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದ ಧೋರಣೆ ನೋಡಿದರೆ ಕಣ್ಣೊರೆಸುವ ಉದ್ದೇಶದಿಂದ ಪರಿಹಾರ ನೀಡುವಂತೆ ಕಾಣುತ್ತಿದೆ. ವಿಧಿಸಿರುವ ಹಲವು ಷರತ್ತುಗಳನ್ನು ಪೂರೈಸಲು ಸಾಧ್ಯವೇ ಇಲ್ಲದಂತಾಗಿದೆ. ಅರ್ಜಿ ಸಲ್ಲಿಸಲು ಸೇವಾ ಸಿಂಧು ಆ್ಯಪ್ ಇನ್ನೂ ಸೂಕ್ತ ರೀತಿಯಲ್ಲಿ ಸಿದ್ಧವಾಗಿಲ್ಲ. ಅ್ಯಪ್ ನ ಸಾಮರ್ಥ್ಯ ಹೆಚ್ಚಿಸಿದರೆ ಮಾತ್ರ ಸರಾಗವಾಗಿ ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಉನ್ನತ ಅಧಿಕಾರಿಗಳು ಗಂಭೀರ ಪ್ರಯತ್ನಗಳನ್ನು ನಡೆಸಿಲ್ಲ. ಲಾಕ್ ಡೌನ್ ಮುಗಿದ ನಂತರ ಸೌಲಭ್ಯ ನೀಡಿದರೆ ಪರಿಹಾರ ಕೊಡುವ ಉದ್ದೇಶವೇ ಅರ್ಥ ಕಳೆದುಕೊಳ್ಳಲಿದೆ ಎಂದು ಹೇಳಿದರು.
ಇನ್ನು ಮಾರ್ಗಸೂಚಿಯಲ್ಲಿ ವಿಧಿಸಿರುವ ಅನಗತ್ಯ ಷರತ್ತುಗಳು ಸರಿಯಲ್ಲ. ಸರ್ಕಾರ ಅನುಜ್ಞಾ ಪತ್ರ ಇರಬೇಕು ಎನ್ನುತ್ತಾರೆ. ಅನುಜ್ಞಾ ಪತ್ರ ಎಂದರೆ ಏನು ಎಂಬುದು ನಮ್ಮ ಚಾಲಕ ಸಮುದಾಯಕ್ಕೆ ತಿಳಿದಿಲ್ಲ. ಬಳಕೆಯಲಿಲ್ಲದ ಶಬ್ಬಕೋಶದಿಂದ ತೆಗೆದು ಮಾರ್ಗ ಸೂಚಿಯಲ್ಲಿ ಸೇರಿಸಿರುವ ಈ ಶಬ್ದದ ಅರ್ಥ ತಿಳಿಸಿದರೆ ನಮ್ಮ ಚಾಲಕರಿಗೆ ಅನುಕೂಲವಾಗಲಿದೆ ಎಂದರು.
೨೪.೦೩.೨೦೨೦ ಕ್ಕೆ ಅನ್ವಯವಾಗುವಂತೆ ಚಾಲನಾ ಪ್ರಮಾಣ ಪತ್ರ (driving license), ವಾಹನ ಸುಸ್ಥಿತಿ ಪ್ರಮಾಣ ಪತ್ರ (Fitness certificate) ಹೊಂದಿದ ವಾಹನಗಳಿಗೆ ಮಾತ್ರ ಪರಿಹಾರ ಎಂದು ಸರ್ಕಾರ ಹೇಳಿದೆ. ಬಹುತೇಕ ಮಂದಿ ಲಾಕ್ ಡೌನ್ ಮತ್ತಿತರ ನಾನಾ ಕಾರಣಗಳಿಂದ ಸುಸ್ಥಿತಿ ಪ್ರಮಾಣ ಪತ್ರ ಪಡೆದುಕೊಂಡಿಲ್ಲ. ಆದರೆ ಬಹುತೇಕರ ಬಳಿ ಆಧಾರ್ ಸಂಖ್ಯೆ ಇದೆ. ಶೇ 85ಕ್ಕಿಂತ ಹೆಚ್ಚು ಮಂದಿ ಬಳಿ ಪ್ಯಾನ್ ಕಾರ್ಡ್ ಇಲ್ಲ. ವಾಹನಗಳ ಮಾಲೀಕರ ಬಳಿ ಮಾತ್ರ ಪ್ಯಾನ್ ಸಂಖ್ಯೆ ಇವೆ. ಹಾಗಾದರೆ ಸರ್ಕಾರ ಪರಿಹಾರವನ್ನು ಚಾಲಕರಿಗೆ ನೀಡುತ್ತದೆಯೋ, ಮಾಲೀಕರಿಗೆ ಕೊಡುತ್ತದೆಯೋ ತಿಳಿಯದಾಗಿದೆ. ಪರಿಹಾರ ಧನ ಮಾಲೀಕರಿಗೆ ಪಾವತಿಯಾಗದಂತೆ ಮತ್ತು ಡುಪ್ಲಿಕೇಷನ್ ಆಗದಂತೆ ತಡೆಯಬೇಕು ಎಂದು ಹೇಳುವ ಸರ್ಕಾರ ಈ ರೀತಿ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವುದರ ಹಿಂದಿನ ಉದ್ದೇಶ ಏನು ಎಂಬುದು ಅರ್ಥವಾಗುತ್ತಿಲ್ಲ. ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ಪದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಫಲಾನುಭವಿ ಅರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ ಅವರಿಗೆ ಪರಿಹಾರ ನೀಡಬಾರದು ಎನ್ನುವ ಸರ್ಕಾರದ ನಿಲುವಿಗೆ ನಮ್ಮ ಸಹಮತವಿದೆ. ಆದರೆ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ದೃಡೀಕರಣ ಪತ್ರ ನೀಡಬೇಕು ಎಂದು ಹೇಳಿರುವುದು ಸಹ ಸರಿಯಲ್ಲ. ಇದಕ್ಕಾಗಿ ಕಂದಾಯ ಅಧಿಕಾರಿಗಳ ಬಳಿ ಸಾಲುಗಟ್ಟಿ ಲಂಚ ಕೊಟ್ಟು ದೃಢೀಕರಣ ಪತ್ರ ಪಡೆಯಬೇಕಾಗುತ್ತದೆ. ಹೀಗಾಗಿ ಆರ್ಥಿಕ ಸ್ಥಿತಿಗತಿ ಬಗ್ಗೆ ಸ್ವಯಂ ದೃಢೀಕರಣ ಪತ್ರ ನೀಡಿ ಸೌಲಭ್ಯ ಪಡೆಯುವ ಅವಕಾಶ ಕಲ್ಪಿಸಬೇಕು ಎಂದು ಗಂಡಸಿ ಸದಾನಂದಸ್ವಾಮಿ ಒತ್ತಾಯಿಸಿದ್ದಾರೆ.