ಕೇಂದ್ರ ಗೃಹ ಸಚಿವಾಲಯದಿಂದ ಲಾಕ್ ಡೌನ್ ಮಾರ್ಗಸೂಚಿ ಬಿಡುಗಡೆ

ದೆಹಲಿ,ಏ ೧೬,ದೇಶಾದ್ಯಂತ  ಲಾಕ್ ಡೌನ್  ದಿಗ್ಬಂಧನವನ್ನು  ಮೇ ೩ವರೆಗೆ  ವಿಸ್ತರಿಸಿರುವ ಹಿನ್ನಲೆಯಲ್ಲಿ   ಕೇಂದ್ರ ಗೃಹ ಸಚಿವಾಲ ಬುಧವಾರ   ಲಾಕ್‌ಡೌನ್ ಮಾರ್ಗಸೂಚಿಗಳನ್ನು ಬಿಡುಗಡೆ ಗೊಳಿಸಿದೆ. ಎರಡನೇ ಹಂತದ  ಲಾಕ್‌ಡೌನ್ ಮುಗಿಯುವವರೆಗೆ ಎಲ್ಲಾ ರೀತಿಯ ಸಾರಿಗೆಗಳನ್ನು ನಿಲ್ಲಿಸಲಾಗುತ್ತದೆ. ಮೇ ೩ ರವರೆಗೆ ಎಲ್ಲಾ ವಿಮಾನ ಸೇವೆಗಳು,  ರೈಲುಗಳು, ಬಸ್ಸುಗಳು ಮತ್ತು ಮೆಟ್ರೋ ರೈಲು ಸೇವೆ  ರದ್ದುಪಡಿಸಲಾಗಿದೆ. ಏಪ್ರಿಲ್ ೨೦ರ ನಂತರ  ಜಾರಿಗೆ ಬರುವಂತೆ  ಲಾಕ್ ಡೌನ್  ನಿರ್ಬಂಧಗಳಲ್ಲಿ   ಕೆಲ   ಸಡಿಲಿಕೆಗಳನ್ನು  ಸೂಚಿಸಿದೆ. ದೇಶಾದ್ಯಂತ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ  ಚಟುವಟಿಕೆ ನಡೆಸಲು  ಅನುಮತಿ ನೀಡಿದೆ. ನಿರ್ಮಾಣ ಚಟುವಟಿಕೆಗಳಿಗೆ ಸೀಮಿತ ಅನುಮತಿ  ನೀಡಲಾಗಿದೆ.  ಕಾಫಿ ಮತ್ತು ಚಹಾ ತೋಟಗಳಿಗೆ ಶೇ ೫೦ ಮಾನವ ಶಕ್ತಿ  ಬಳಕೆಗೆಅನುಮತಿಸಲಾಗಿದೆ. ಮತ್ಸ್ಯ ಉದ್ಯಮವನ್ನು ಮುಂದುವರಿಸಬಹುದು ಎಂದು ಹೇಳಿದೆ. ನಗರ ವ್ಯಾಪ್ತಿಯಲ್ಲಿ ಎಲ್ಲಾ ಆಹಾರ ಸಂಸ್ಕರಣಾ ಘಟಕಗಳಿಗೆ ಅನುಮತಿ ನೀಡುತ್ತದೆ.  ಕೊರೊನಾ  ವೈರಸ್  ಪ್ರಕರಣಗಳು ದಾಖಲಾಗದ  ಪ್ರದೇಶಗಳಲ್ಲಿ ಮಾತ್ರ ಈ  ಸಡಿಲಿಕೆ  ಜಾರಿಗೆ ಬರಲಿವೆ.  ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಮುಖಗವುಸು  ಧರಿಸುವುದು ಕಡ್ಡಾಯವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು  ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ೫ ದಿನಗಳವರೆಗೆ ಲಾಕ್‌ಡೌನ್  ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ ನಂತರ, ನಿಯಮಾವಳಿ ಸಡಿಲಿಸಲಾಗುತ್ತದೆ.

* ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ ನೀಡಲು   ಸಂಸ್ಥೆಗಳಿಗೆ ಅನುಮತಿ
* ರಸಗೊಬ್ಬರ ಸೇರಿದಂತೆ ಕೀಟನಾಶಕ ಮಾರಾಟ ಮಳಿಗೆಗಳಿಗೆ ಅನುಮತಿ
* ಬ್ಯಾಂಕುಗಳ ಕಾರ್ಯಕಲಾಪಗಳು ಯಥಾರೀತಿ ನಡೆಸಲು  ಅವಕಾಶ
* ಅನಾಥಾಶ್ರಮ,  ದಿವ್ಯಾಂಗ ಹಾಗೂ  ವೃದ್ದಾಶ್ರಮ  ನಿರ್ವಹಣೆಗೆ  ಅನುಮತಿ
* ರಸ್ತೆಬದಿ ಡಾಬಾಗಳು ಹಾಗೂ  ವಾಹನ ದುರಸ್ತಿ ಅಂಗಡಿಗಳಿಗೆ ಅನುಮತಿ
* ಸಿನೆಮಾ ಹಾಲ್‌ಗಳು, ಶಾಪಿಂಗ್ ಸಂಕೀರ್ಣಗಳು, ವ್ಯಾಯಾಮಶಾಲೆ ಮತ್ತು ಕ್ರೀಡಾ ಸಂಕೀರ್ಣಗಳ ಮುಚ್ಚುವಿಕೆ.
* ಇತರ ಪ್ರದೇಶಗಳಿಂದ  ಕಾರ್ಮಿಕರನ್ನು   ಕರೆತರಲು   ಅನುಮತಿ ನಿರಾಕರಣೆ. 
* ಗೋದಾಮುಗಳು ಮತ್ತು ಶೀತಲ ಗೋದಾಮುಗಳಿಗೆ ಅನುಮತಿ
* ಇ-ಕಾಮರ್ಸ್  ಸಂಸ್ಥೆಗಳು, ವಾಹನಗಳಿಗೆ  ಅನುಮತಿ.
* ಮದುವೆ ಮತ್ತು ಇತರ ಶುಭಕಾರ್ಯ ನಡೆಸಲು  ಜಿಲ್ಲಾಧಿಕಾರಿ  ಅನುಮತಿ ಕಡ್ಡಾಯ


* ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಮೋಟಾರ್ ಮೆಕ್ಯಾನಿಕ್ಸ್ ಮತ್ತು ಬಡಗಿಗಳ ಸೇವೆಗಳಿಗೆ  ಅನುಮತಿ.
* ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು, ಕುಡಿಯುವ ನೀರು  ಮತ್ತು ಕೈಗಾರಿಕಾ ಯೋಜನೆಗಳ ನಿರ್ಮಾಣಕ್ಕೆ ಅನುಮತಿ
* ಸಾರ್ವಜನಿಕ ಸ್ಥಳಗಳಲ್ಲಿ  ಉಗುಳಿದರೆ   ದಂಡ ವಿಧಿಸಲಾಗುತ್ತದೆ
* ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ  ಮುಖಗವುಸು  ಕಡ್ಡಾಯವಾಗಿ ಧರಿಸಬೇಕು
* ಹಾಟ್‌ಸ್ಪಾಟ್ ಪ್ರದೇಶಗಳಿಗೆ ಈ ಯಾವುದೇ ವಿನಾಯಿತಿಗಳಿಲ್ಲ ಎಂದು ಕೇಂದ್ರ  ಸರ್ಕಾರ  ಘೋಷಿಸಿದ್ದು,  ಅಗತ್ಯ ಸೇವೆಗಳ  ವಿತರಣೆ  ಹೊರತುಪಡಿಸಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ ಎಂದು ಅದು ಹೇಳುತ್ತದೆ.
* ಕೇಂದ್ರ ಆರೋಗ್ಯ ಇಲಾಖೆ ಹಾಟ್‌ಸ್ಪಾಟ್ ಪ್ರದೇಶಗಳ ಬಗ್ಗೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಲಿದೆ.
* ಹಾಟ್‌ಸ್ಪಾಟ್ ವಲಯಗಳನ್ನು ರಾಜ್ಯಸರ್ಕಾರ  ಹಾಗೂ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು ಘೋಷಿಸಲಿದ್ದಾರೆ. ಈ ಪ್ರದೇಶಗಳಿಗೆ ಸಾಮಾನ್ಯ ವಿನಾಯಿತಿಗಳು ಅನ್ವಯಿಸುವುದಿಲ್ಲ.