ಅಂತರ್ ರಾಜ್ಯ, ಅಂತರ್ ಜಿಲ್ಲೆ ನಡುವಿನ ಸಂಚಾರ ನಿಯಮಗಳು ಸಡಲಿಕೆ

ನವದೆಹಲಿ, ಮೇ 31,ಐದನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆ ನಡುವಿನ ಸಂಚಾರಕ್ಕೆ ಇದ್ದ ನಿಯಮಗಳು ಸಡಲಿಕೆಯಾಗಿವೆ.ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ, ಜನ ಮತ್ತು ಸರಕು ಸಾಗಣೆಗೆ ಪ್ರತ್ಯೇಕ ಅನುಮತಿ ಬೇಕಾಗಿಲ್ಲ. ವಿದ್ಯುನ್ಮಾನ ರಹದಾರಿ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಂತರ್ ರಾಜ್ಯ ಪ್ರವಾಸಕ್ಕೆ ಈ ವರೆಗೆ ಆನ್ ಲೈನ್ ಮೂಲಕ ಅನುಮತಿ ಪತ್ರ ಪಡೆಯಬೇಕಾಗಿತ್ತು.

ಕೇಂದ್ರ ನಿರ್ಬಂಧಗಳನ್ನು ಸಡಲಿಸಿದ್ದರೂ ಸಹ ಆಯಾ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಪರಮಾಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ. ಸಾರ್ವಜನಿಕ ಆರೋಗ್ಯ, ಆಯಾ ಪರಿಸ್ಥಿತಿಗೆ ತಕ್ಕಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು  ವಾಹನ ಸಂಚಾರಕ್ಕೆ ನಿಯಂತ್ರಣಗಳನ್ನು ಹೇರಬಹುದು. ಯಾವುದೇ ತೀರ್ಮಾನಕ್ಕೂ ಮುನ್ನ ಜನರಿಗೆ ನಿರ್ಬಂಧ ಕುರಿತಾದ ಮಾಹಿತಿ ಒದಗಿಸಬೇಕು ಎಂದು ಕೇಂದ್ರ ತಿಳಿಸಿದೆ.ಕಂಟೈನ್ಮೆಂಟ್ ವಲಯಗಳ ಹೊರಗೆ ನಿದಿಷ್ಟ ಚಟುವಟಿಕೆಗಳನ್ನು ನಿಷೇಧಿಸಲು ಪರಿಸ್ಥಿತಿ ಆಧರಿಸಿ ರಾಜ್ಯಗಳು ಕ್ರಮ ಕೈಗೊಳ್ಳಬಹುದು. ೬೫ ವರ್ಷಕ್ಕಿಂತ ಹೆಚ್ಚು ವಯಸ್ಸಾದ ವೃದ್ಧರು, ಗರ್ಭಿಣಿಯರು ಮತ್ತು ೧೦ ವರ್ಷದೊಳಗಿನ ಮಕ್ಕಳು ಆದಷ್ಟು ಮನೆಯಲ್ಲೇ ಉಳಿಯಬೇಕು ಎಂದು ಸಲಹೆ ನೀಡಿದೆ.ಇತ್ತೀಚೆಗೆ ಶ್ರಮಿಕ್ ರೈಲುಗಳಲ್ಲಿ 30 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಪ್ರಸವವಾಗಿತ್ತು. ಈ ಹಿನ್ನೆಲೆಯಲ್ಲಿ ಗರ್ಭಿಣಿಯರು ಪ್ರಯಾಣ ಮಾಡುವುದು ಸೂಕ್ತವಲ್ಲ ಎಂದು ಕಿವಿ ಮಾತು ಹೇಳಿದೆ.