ಬೆಂಗಳೂರು, ನ 28- ಕೇಂದ್ರ ಸರ್ಕಾರ ಪ್ರಾಯೋಜಿತ ಪ್ರಧಾನಮಂತ್ರಿ ಮಾನ್-ಧನ್ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು. ಅದಕ್ಕಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯದಲ್ಲಿ ಒಟ್ಟು 6 ಲಕ್ಷ ಮಂದಿ ಅಸಂಘಟಿತ ವಲಯದ ಕಾರ್ಮಿಕರನ್ನು ನೊಂದಾಯಿಸಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ವಹಿಸಿದ್ದ ಅವರು, ಯೋಜನೆಯ ಸುಲಲಿತ ನಿರ್ವಹಣೆಗಾಗಿ ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಸಮಿತಿಗಳನ್ನು ರಚಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಾರ್ಮಿಕರು ಮಾಸಿಕ 200 ರೂ. ಪಾವತಿಸಿದರೆ ಅವರಿಗೆ 60 ವರ್ಷವಾದಾಗ ಮಾಸಿಕ 3000 ರೂ. ನಿವೃತ್ತಿ ವೇತನ ದೊರೆಯುತ್ತದೆ ಎಂದರು.
ಏಕ ಗವಾಕ್ಷಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕ ಸಹಾಯವಾಣಿ ಆರಂಭಕ್ಕೆ ಈಗಾಗಲೇ ಕ್ರಮವಹಿಸಲಾಗಿದ್ದು, 2020ರ ಜನವರಿ ವೇಳೆಗೆ ಸುಸಜ್ಜಿತ ವ್ಯವಸ್ಥೆಯ 24X7 ಕಾರ್ಮಿಕ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಇದು ಕಾರ್ಮಿಕ ಇಲಾಖೆಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಲಿದೆ ಎಂದರು.
ವಿವಿಧ ಕಾರ್ಮಿಕ ವಲಯಗಳ ಕನಿಷ್ಠ ವೇತನ ನಿಗದಿ, ಕೆಲಸದ ಅವಧಿ ನಿಗದಿ, ವಿಶೇಷವಾಗಿ ಮಹಿಳೆಯರಿಗೆ ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡುವ ಅವಕಾಶ, ಸ್ಥಳೀಯ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ನೇಮಕಾತಿ ಪ್ರಾತಿನಿಧ್ಯ, ಅಂಗಡಿ ಮುಂಗಟ್ಟುಗಳು ವರ್ಷದ 365 ದಿನವೂ ತೆರೆದಿರಬಹುದಾದ ಮಸೂದೆ,, ಗೊಂಬೆ ತಯಾರಿಕಾ ಘಟಕದ ನೌಕರರಿಗೂ ಸಹ ಕನಿಷ್ಠ ವೇತನ ಸೇರಿದಂತೆ ಹಲವು ಮಸೂದೆಗಳಿಗೆ ಕಳೆದ ಎರಡೂವರೆ ತಿಂಗಳಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಸ್ವಿಗ್ಗಿ, ಜೊಮಾಟೋ, ಓಲಾ, ಉಬರ್ ನಂತಹ ಆಪ್ ಆಧಾರಿತವಾದ ನವ ಕಾರ್ಮಿಕ ವಲಯದ ಸೇವಾ ಭದ್ರತೆಯ ಕುರಿತಾದ ವಿಶಿಷ್ಟ ನಿಯಮಗಳನ್ನು ರೂಪಿಸುವಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಕಾನೂನು ತಜ್ಞರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ನಿಯಮಗಳಿಗೆ ಇದೇ ಡಿಸೆಂಬರ್ ಅಂತ್ಯದೊಳಗೆ ಅಂತಿಮ ರೂಪುರೇಷೆಗಳನ್ನು ನೀಡಿ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಟ್ಟಡ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜಧಾನಿ ಬೆಂಗಳೂರು ನಗರದಲ್ಲಿ 10 ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಐದು ಕೇಂದ್ರಗಳು ಸೇವೆಗೆ ಸಿದ್ಧವಾಗಿವೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲ 10 ಕೇಂದ್ರಗಳನ್ನು ಆರಂಭಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.