ಮುಸ್ಲಿಂ ಎಂಬ ಕಾರಣಕ್ಕೆ ಡೆಲಿವರಿ ಬಾಯ್‌ಯಿಂದ ಪಾರ್ಸೆಲ್ ಸ್ವೀಕರಿಸಲು ನಿರಾಕರಣೆ: ಆರೋಪಿ ಬಂಧನ

ಥಾಣೆ, ಏ.22,ಪಾರ್ಸೆಲ್‌ ತಂದ ವ್ಯಕ್ತಿ ಮುಸ್ಲಿಂ ಎಂಬ ಕಾರಣಕ್ಕೆ ಅದನ್ನು ಸ್ವೀಕರಿಸಲು ನಿರಾಕರಿಸಿದ ಮತ್ತು ಅವರನ್ನು ಹಿಂದಕ್ಕೆ ಕಳುಹಿಸಿದ ಆರೋಪದಲ್ಲಿ 51 ವರ್ಷ ಪ್ರಾಯದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಮೀರಾ ರಸ್ತೆ ಉಪನಗರದ ಕಾಶಿಮೀರಾ ಪ್ರದೇಶದ ನಿವಾಸಿ ಗಜಾನನ ಚತುರ್ವೇದಿ ಎಂದು ಗುರುತಿಸಲಾಗಿದೆ.ಡೆಲಿವರಿ ಏಜೆಂಟ್  ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಆರೋಪಿಯ ಮನೆಗೆ ಡೆಲಿವರಿ ಏಜೆಂಟ್ ಸರಕುಗಳನ್ನು ತಲುಪಿಸಲು ಹೋಗಿದ್ದ. ಈ ವೇಳೆ ಆರೋಪಿ ಗಜಾನನ, ಡೆಲಿವರಿ ಏಜೆಂಟ್‌ನ ಹೆಸರು  ಕೇಳಿದ್ದಾನೆ. ಆಗ ಹೆಸರು ಹೇಳಿದಾಗ, ನಾನು ಮುಸ್ಲಿಮ್ ವ್ಯಕ್ತಿಯಿಂದ ಪಾರ್ಸೆಲ್ ಸ್ವೀಕರಿಸುವುದಿಲ್ಲ ಎಂದು ಮುಖ ತಿರುಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗ ಏಜೆಂಟ್ ಈ ಬಗ್ಗೆ ಥಾಣೆ ಗ್ರಾಮೀಣ ಡಿಎಸ್ಪಿ ಶಿವಾಜಿ ರಾಥೋಡ್ ಅವರಿಗೆ ತಿಳಿಸಿದ್ದಾನೆ. ತಕ್ಷಣ ಅವರು ಕಾಶಿಮೀರಾ ಪೊಲೀಸ್ ಠಾಣೆಗೆ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ  ನೀಡಿದ್ದಾರೆ.ಕೊರೋನಾ ಸಾಂಕ್ರಾಮಿಕ  ಸಮಯದಲ್ಲಿಯೂ ನಾವು ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದೇವೆ. ಆದರೂ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಮುದಾಯಗಳ  ನಡುವೆ ವೈಷಮ್ಯವನ್ನು ಪ್ರಕಟಿಸುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಘಟನೆಯ ಬಗ್ಗೆ ಏಜೆಂಟ್ ಪ್ರತಿಕ್ರಿಯಿಸಿದ್ದಾರೆ.ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆದಕುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಸಂಜಯ್ ಹಜಾರೆ  ತಿಳಿಸಿದ್ದಾರೆ.