ಬೆಂಗಳೂರು, ಆ 13 ರಾಜ್ಯದ ಕೃಷ್ಣಾ ಮತ್ತು ಕಾವೇರಿ ನದಿ ಪಾತ್ರದಲ್ಲಿ ಪ್ರವಾಹಮಟ್ಟ ಇಳಿಕೆಯಾಗಿದ್ದು, ಪರಿಹಾರ ಕಾರ್ಯ ಚುರುಕುಗೊಂಡಿದೆ. ಒಟ್ಟಾರೆ ಮಳೆ, ಪ್ರವಾಹ ಮತ್ತು ಭೂ ಕುಸಿತಕ್ಕೆ 6 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಆದರೆ ಮಲೆನಾಡು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೊಡಗು ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದು, ನಿರಾಶ್ರಿತ ಕೇಂದ್ರಗಳಿಗೆ ಪರಿಹಾರ ಸಾಮಗ್ರಿ ಹರಿದುಬರುತ್ತಿದೆ. ಆದರೆ ಕೆಲವು ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಸಂತ್ರಸ್ತರು ಪರದಾಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಪ್ರವಾಹದಿಂದ ತಮ್ಮ ಮನೆ ಮಠ ಕಳೆದುಕೊಂಡು 1200 ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಜನರು ನಿಧಾನವಾಗಿ ತಮ್ಮ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ರೈತ ಸಮುದಾಯವಾಗಿದೆ. ಕೊಪ್ಪಳ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾ, ತುಂಗಭದ್ರಾ, ಭೀಮಾ ನದಿಗಳ ಅಬ್ಬರ ಇಳಿಮುಖವಾಗಿದೆ. ಅದೇ ರೀತಿ ಕೊಡಗು, ಮೈಸೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿದೆ. ಕಳೆದ ಮೂರು ವಾರಗಳಲ್ಲಿ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹ ಸಂಬಂಧಿತ ಘಟನೆಗಳಿಂದಾಗಿ ಈ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ತಲುಪುತ್ತಿದ್ದು, ನಾರಾಯಣಪುರ ಜಲಾಶಯದಿಂದ 5.88 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಆಲಮಟ್ಟಿ ಜಲಾಶಯದಿಂದ ಹೊರಹರಿವು 5.7 ಲಕ್ಷ ಕ್ಯೂಸೆಕ್ಗಳಿಗೆ ಇಳಿದಿದೆ. ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಒಳಹರಿವು ಮತ್ತು ಹೊರಹರಿವು 86,000 ಕ್ಯೂಸೆಕ್ಗಳಿಗೆ ಇಳಿಕೆಯಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸತತ ಎರಡನೇ ದಿನವಾದ ಇಂದು ಕೂಡ ಕಾವೇರಿ ಮತ್ತು ಕಪಿಲಾ ನದಿಯ ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಎರ್ ಎಸ್ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಎಸ್ಆರ್ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ. ಕೆಆರ್ ಎಸ್ ಜಲಾಶಯದಿಂದ 20 ಸಾವಿರದಿಂದ 50 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಕಾವೇರಿ ನದಿ ತಗ್ಗು ಪ್ರದೇಶದಲ್ಲಿ ಇರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗೃತಾ ಕ್ರಮಕೈಗೊಳ್ಳಬೇಕು ಎಂದು ಕೆಆರ್ ಎಸ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಇಂದು ಎಚ್ಚರಿಕೆ ನೀಡಿದ್ದಾರೆ. ಇಂದು, ಕೆಆರ್ಎಸ್ನಲ್ಲಿ ನೀರಿನ ಮಟ್ಟವು 123.90 ಅಡಿಗಳಷ್ಟಿದ್ದು, ಜಲಾಶಯದ ಒಟ್ಟು ನೀರಿನ ಮಟ್ಟ 124.80 ಅಡಿಗಿಂತ ಸ್ವಲ್ಪ ಕಡಿಮೆ ಇದೆ. ಒಳಹರಿವು 88,430 ಕ್ಯೂಸೆಕ್ಗಳದ್ದು, ಇದು ನಿನ್ನೆ ಎರಡು ಲಕ್ಷಕ್ಕಿಂತ ಹೆಚ್ಚಾಗಿತ್ತು. ಆದಾಗ್ಯೂ, ಜಿಲ್ಲೆಯ ಅನೇಕ ಹಳ್ಳಿಗಳು ಇನ್ನೂ ಜಲಾವೃತವಾಗಿವೆ. ನೆರೆಯ ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ವ್ಯಾಪ್ತಿಯ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾದ ನಂತರ ಒಳಹರಿವು ಇಂದು 32,200 ಕ್ಯೂಸೆಕ್ಗಳಿಗೆ ಇಳಿದಿದೆ, ಹೊರಹರಿವು 50,000 ಕ್ಯೂಸೆಕ್ಗಳಿವೆ, ಜಲಾಶಯದ ಗರಿಷ್ಠ ಸಾಮಥ್ರ್ಯ 2284 ಅಡಿಗಳಿದ್ದು, ಈಗ ನೀರಿನ ಪ್ರಮಾಣ 2283.10 ಅಡಿಯಷ್ಟಿದೆ. ಕಪಿಲಾ ನದಿಯ ದಡದಲ್ಲಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಇಂದು ಸಹಜ ಸ್ಥಿತಿಗೆ ಮರಳಿದೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕಾಗಿ ಮುಕ್ತಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ತಿಂಗಳ ಆರಂಭದಿಂದಲೂ ನಿರಂತರ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿಲಾಗಿತ್ತು. ಆದರೆ ಈಗ ಮುಂದಿನ ಐದು ದಿನಗಳವರೆಗೆ ಯಾವುದೇ ಪ್ರಮುಖ ಮಳೆ ಎಚ್ಚರಿಕೆ ಮುನ್ಸೂಚನೆ ನೀಡಲಾಗಿಲ್ಲ. ಇದರಿಂದ ರಕ್ಷಣಾ ಮತ್ತು ಪರಿಹಾರ ತಂಡಕ್ಕೆ ನೆಮ್ಮದಿ ಸಿಕ್ಕಿದಂತಾಗಿದೆ. ಇದರಿಂದ ಪರಿಹಾರ ಕಾರ್ಯ ಚುರುಕುಗೊಳ್ಳುವ ಸಾಧ್ಯತೆ ಇದೆ. ಕಾಫಿ ನಾಡು ಕೊಡಗು ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಮುಂದಿನ ಐದು ದಿನಗಳಲ್ಲಿ ಜಿಲ್ಲೆಯ ಕೆಲವು ಒಳಪ್ರದೇಶಗಳಲ್ಲಿ ಭಾರಿ ಮಳೆಯಾಗುವುದನ್ನು ಹೊರತುಪಡಿಸಿ ಇತರೆಡೆ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.