ಬೆಂಗಳೂರು, ಏ.4, ಮಾರಣಾಂತಿಕ ಕೋವಿಡ್ 19 ಸೋಂಕು ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಘೋಷಿಸಿದ ಬಳಿಕ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ನಗರಗಳಲ್ಲಿನ ವಾಯುಮಾಲಿನ್ಯ ಗಣನೀಯವಾಗಿ ಕುಸಿದಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ.ಸಾರಿಗೆ ಬಸ್ ಸೇರಿದಂತೆ ಎಲ್ಲಾ ವಾಹನಗಳು ರಸ್ತೆಗಳಿಯದ ಪರಿಣಾಮ ಪರಿಣಾಮ ರಾಜ್ಯದಲ್ಲಿ ವಾಯುಮಾಲಿನ್ಯದ ಪ್ರಮಾಣ ಇಳಿಕೆಯಾಗಿದೆ. ಕೈಗಾರಿಕೆಗಳೂ ಬಂದ್ ಆಗಿರುವುದರಿಂದ ಗಾಳಿಯಲ್ಲಿದ್ದ ನೈಟ್ರೋಜನ್ ಡೈ ಆಕ್ಸೈಡ್, ಕಾರ್ಬನ್ ಮಾನೋಕ್ಸೈಡ್, ಕಾರ್ಬನ್ ನಂತಹ ವಿಷಕಾರಿ ಅನಿಲಗಳು ಶೇ.70 ರಷ್ಟು ಕಡಿಮೆಯಾಗಿದ್ದು, ಬೆಂಗಳೂರು ಸೇರಿ ರಾಜ್ಯದ ವಿವಿಧ ನಗರಗಳ ಗಾಳಿಯ ಗುಣಮಟ್ಟ ಮೂರು ದಶಕದ ಹಿಂದಿನಷ್ಟು ಶುದ್ಧವಾಗಿದೆ.
ಕಳೆದ ಮಾರ್ಚ್ 3 ರಿಂದ 20ರವರೆಗಿನ ಅವಧಿಯಲ್ಲಿ ನಗರದ ವಾಯುಮಾಲಿನ್ಯ ಶೇ 40 ರಷ್ಟು ಕುಸಿದಿತ್ತು. ಇದೀಗ ಈ ಮಾಲಿನ್ಯ ಪ್ರಮಾಣ ಶೇ. 64 ರಷ್ಟು ಕಡಿಮೆಯಾಗಿದೆ. ಅಂಕಿ ಅಂಶಗಳ ಪ್ರಕಾರ, ಕೊರೊನಾ ಭೀತಿ ಆರಂಭವಾಗುವವರೆಗೆ ವಾಯು ಗುಣಮಟ್ಟ ಸೂಚ್ಯಂತ (ಎಕ್ಯೂಐ)ದ ಪ್ರಕಾರ ನಗರದ ವಾಯು ಮಾಲಿನ್ಯ ವಿಪರೀತ ಹೆಚ್ಚಿತ್ತು. ಕೊರೊನಾ ಭೀತಿ ಶುರುವಾದ ಬಳಿಕ ಮತ್ತು ಲಾಕ್‌ಡೌನ್ ಘೋಷಣೆಯಾದ ನಂತರ ಗಣನೀಯವಾಗಿ ಇಳಿಯುತ್ತಾ ಬಂದಿದೆ. ಪ್ರಮುಖವಾಗಿ ಕೋರಮಂಗಲದಲ್ಲಿ ಮೊದಲಿಗೆ 128 ರಷ್ಟಿದ್ದ ಎಕ್ಯೂಐ, ಕೊರೊನಾ ಭೀತಿ ಆರಂಭವಾದ ಬಳಿಕ 86 ಕ್ಕೆ ಇಳಿದಿದ್ದು, ಈಗ 40 ಕ್ಕೆ ಬಂದು ನಿಂತಿದೆ. ಅದೇ ರೀತಿ ಇಂದಿರಾ ನಗರ, ಎಂಜಿ ರಸ್ತೆ, ಬನ್ನೇರುಘಟ್ಟ, ಸಿಲ್ಕ್ ಬೋರ್ಡ್, ಹೆಬ್ಬಾಳ, ಜಯನಗರ ನಿಮ್ಹಾನ್ಸ್ ಸೇರಿದಂತೆ ನಗರದ ಹಲವೆಡೆ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿದಿದೆ.ಅದೇ ರೀತಿ ರಾಜ್ಯದ ಪ್ರಮುಖ ನಗರಗಳಲ್ಲಿಯೂ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.