ಲೋಕದರ್ಶನ ವರದಿ
ಗಂಗಾವತಿ 08: ಸೋಮವಾರ ಸುರಿದ ಅಕಾಲಿಕ ಮಳೆಯಿಂದಾಗಿ ಗಂಗಾವತಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಭತ್ತದ ಬೆಳೆ ನಾಶಹೊಂದಿದ್ದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಚಪ್ಪಾಳೆ, ಜಾಗಟೆ, ದೀಪ ಮಾಡುವದನ್ನು ನಿಲ್ಲಿಸಿ ತಕ್ಷಣ ರೈತರಿಗೆ ಪ್ರತಿ ಹೆಕ್ಟೇರ್ಗೆ 50 ಸಾ.ರು. ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಒತ್ತಾಯಿಸಿದರು.
ಮಂಗಳವಾರ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 75 ರಿಂದ 80 ಸಾವಿರ ಎಕರೆ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನಾಶಗೊಂಡಿದೆ. ಈ ಕುರಿತು ವೈಮಾನಿಕ ಸಮೀಕ್ಷೆ ನಡೆಸಬೇಕು ಮತ್ತು ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಹೇಳಿದರು.
ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಇದೇ ರೀತಿ ಭಯಂಕರ ಮಳೆಯಿಂದಾಗಿ ಭತ್ತದ ಬೆಳೆ ನಾಶಗೊಂಡಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹತ್ತಿರ ವಿಷಯ ಪ್ರಸ್ತಾಪ ಮಾಡಿದ ತಕ್ಷಣ ಸಚಿವ ಸಂಪುಟದ ಸಭೆ ನಡೆಸಿದರು. ಅಂದಿನ ಸಂದರ್ಭದಲ್ಲಿ ಪ್ರತಿ ಹೆಕ್ಟೇರ್ಗೆ 25 ಸಾ.ರು. ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿತ್ತು ಎಂದು ತಿಳಿಸಿದರು. 15 ದಿನಗಳೊಳಗೆ ಪರಿಹಾರ ಘೋಷಣೆ ಮಾಡದಿದ್ದರೆ ತಮ್ಮ ಪಕ್ಷದಿಂದ ಉಗ್ರರೂಪದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಕೊರೊನಾ ನೆಪದಲ್ಲಿ ರೈತರ ವಿಷಯವನ್ನು ನಿರ್ಲಕ್ಷ್ಯ ಮಾಡಕೂಡದು. ಇದರ ಜೊತೆಗೆ ಒಣ ಬೇಸಾಯ, ತೋಟಗಾರಿಕೆ ಬೆಳೆಗಳಾದ ಮಾವು, ಬಾಳೆ, ಪಪ್ಪಾಯಿ, ದಾಳಿಂಬೆ ಮತ್ತು ದ್ರಾಕ್ಷಿ ಬೆಳೆದ ರೈತರಿಗೆ ಪರಿಹಾರ ನೀಡಬೇಕು ಎಂದು ತಂಗಡಗಿ ಒತ್ತಾಯಿಸಿದರು. ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕುರಿತು ಕಾಳಜಿ ವಹಿಸುತ್ತಿಲ್ಲ. ಇವರು ರೈತ ವಿರೋಧಿಗಳು ಎಂದು ಟೀಕಿಸಿದರು.
ತಹಸೀಲ್ದಾರ ನಾಪತ್ತೆ: ಈ ಸಂದರ್ಭದಲ್ಲಿ ಕಾರಟಗಿ ಮತ್ತು ಕನಕಗಿರಿ ತಹಶೀಲ್ದಾರರು ನಾಪತ್ತೆಯಾಗಿದ್ದಾರೆ. ಬೆಳೆ ನಾಶಗೊಂಡಿದ್ದರು ಸಹ ಮಾಹಿತಿ ಪಡೆಯಲು ಇವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದರು. ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಸದಸ್ಯ ಅಮರೇಶ ಗೋನಾಳ ಇದ್ದರು.