ಲೋಕದರ್ಶನ ವರದಿ
ಹಳಿಯಾಳ: ತಾಲೂಕಾ ಆಸ್ಪತ್ರೆಯ ಸ್ವಚ್ಛತೆ ಮೊದಲಾದ ಕೆಲಸಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಡುತ್ತಿದ್ದ ತಮಗೆ ಮತ್ತೆ ಕೆಲಸಕ್ಕೆ ಸೇರಿಸಿಕೊಂಡು ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಆಸ್ಪತ್ರೆ ಎದುರು ಧರಣಿ ನಡೆಸಲಾಗಿದೆ.
ಆಸ್ಪತ್ರೆಯಲ್ಲಿ 10-15 ವರ್ಷಗಳಿಂದ ಕೆಲಸ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದ ತಮ್ಮನ್ನು 7 ತಿಂಗಳ ವೇತನ ನೀಡದೇ ಕಳೆದ 2 ತಿಂಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ನಯೋಮಿ ಶ್ರೀಕಾಂತ ಮಾದರ, ಶಕುಂತಲಾ ಪ್ರಕಾಶ ಕಲ್ಲವಡ್ಡರ್, ಶಾಂತವ್ವಾ ಈರಪ್ಪಾ ವಡ್ಡರ್, ಲಕ್ಷ್ಮೀ ಲಕ್ಷ್ಮಣ ಪೂಜಾರಿ, ರಾಧಾ ಪ್ರಶಾಂತ ಮಾದರ, ಮಾದೇವಿ ಬಾಳಪ್ಪಾ ವಡ್ಡರ್, ಮುಬಾರಕ ಅಕ್ಬರ ಅರ್ಲವಾಡ, ನಾಗವ್ವಾ ಬಸವರಾಜ ವಡ್ಡರ್, ಲಕ್ಷ್ಮೀ ನಾಗರಾಜ ವಡ್ಡರ್ ಎಂಬುವವರು ಧರಣಿ ಕುಳಿತರು.
ಕಾರ್ಮಿಕರ ಹೋರಾಟಗಾರರಾದ ಸಿಐಟಿಯು ಮುಖಂಡ ಹರೀಶ ನಾಯ್ಕ, ಮಾತೆ ಸಾವಿತ್ರಿಬಾಯಿ ಪುಳೆ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಶಾಂತಾ ಅನಂತಸೇನ ಕುಲಕಣರ್ಿ ಇವರುಗಳು ಧರಣಿ ಸ್ಥಳಕ್ಕೆ ಹೋಗಿ ಬೆಂಬಲ ವ್ಯಕ್ತಪಡಿಸಿದರು. ನಂತರ ತಾಲೂಕಾ ಆರೋಗ್ಯಾಧಿಕಾರಿ ಡಾ. ರಮೇಶ ಕದಂ, ಸಿಪಿಐ ಬಿ.ಎಸ್. ಲೋಕಾಪುರ ಇವರ ಉಪಸ್ಥಿತಿಯಲ್ಲಿ ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರು ಸ್ಥಳಕ್ಕೆ ತೆರಳಿ ಧರಣಿ ನಿರತರು ಹಾಗೂ ಕಾರ್ಮಿಕರ ಮುಖಂಡ ಹರೀಶ ನಾಯ್ಕ ಇವರೊಂದಿಗೆ ಮಾತುಕತೆ ನಡೆಸಿದರು. ಕಾಮರ್ಿಕರ ಹೊರಗುತ್ತಿಗೆದಾರ ದಿಲೀಪ ನಾಯ್ಕ ಎಂಬುವವರನ್ನು ಜೂನ್ 21 ರಂದು ಕರೆಯಿಸಿ ಅವರ ಸಮಕ್ಷಮ ಸರಕಾರದ ನಿಯಮಾವಳಿಗಳಂತೆ ಸಮಸ್ಯೆಯನ್ನು ಇತ್ಯರ್ಥಪಡಿಸುವ ಬಗ್ಗೆ ನಿರ್ಧರಿಸಿದ ಕಾರಣ ಧರಣಿಯನ್ನು ಹಿಂಪಡೆಯಲಾಯಿತು.