ದುಬೈ, ಫೆ 11, ಕಳೆದ ಭಾನುವಾರ 19 ವಯೋಮಿತಿ ವಿಶ್ವಕಪ್ ಫೈನಲ್ ಬಳಿಕ ಉಭಯ ತಂಡಗಳ ನಡುವೆ ನಡೆದಿದ್ದ ವಾಗ್ವಾದದ ಪ್ರಕರಣ ಸಂಬಂಧ ಬಾಂಗ್ಲಾದೇಶದಿಂದ ಮೂವರು ಮತ್ತು ಭಾರತದಿಂದ ಇಬ್ಬರು ಸೇರಿ ಒಟ್ಟು ಐವರು ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶಿಸ್ತುಕ್ರಮ ಜರುಗಿಸಿದೆ. ಫೈನಲ್ ಹಣಾಹಣಿಯಲ್ಲಿ ಪ್ರಿಯಮ್ ಗರ್ಗ್ ನಾಯಕತ್ವದ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ ಮೂರು ವಿಕೆಟ್‌ಗಳಿಂದ(ಡಿಎಲ್‌ಎಸ್ ಮೂಲಕ) ಸೋಲು ಅನುಭವಿಸಿತ್ತು. ಚೊಚ್ಚಲ ವಿಶ್ವಕಪ್ ಜಯಸಿದ ಸಂಭ್ರಮದಲ್ಲಿ ಬಾಂಗ್ಲಾ ಆಟಗಾರರು ಅತಿರೇಕದ ವರ್ತನೆ ಭಾರತದ ಆಟಗಾರರನ್ನು ಕೆರಳಿಸಿತ್ತು. ಈ ವೇಳೆ ಉಭಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ-ಕೈ ಮಿಲಾಯಿಸುವಷ್ಟರ ಮಟ್ಟಿಗೆ ಘಟನೆ ತಾರಕಕ್ಕೇರಿತ್ತು. ಈ ವೇಳೆ ತೀರ್ಪುಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಸರಿದೂಗಿಸಿದ್ದರು.
ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಬಾಂಗ್ಲಾದೇಶದ ಆಟಗಾರರಾದ ತೌಹಿದ್ ವೃದಾಯ್, ಶಮೀಮ್ ಹೊಸೈನ್ ಮತ್ತು ರಕಿಬುಲ್ ಹಸನ್ ಅವರಿಗೆ ಆರು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗಿದೆ ಮತ್ತು ಐಸಿಸಿ ನೀತಿ ಸಂಹಿತೆಯ ಮೂರನೇ ಹಂತದ ಉಲ್ಲಂಘನೆಗೆ ಗುರಿಯಾಗಿದೆ ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದ ಆಕಾಶ್ ಸಿಂಗ್ ಮತ್ತು ರವಿ ಬಿಷ್ಣೋಯಿ ಅವರಿಗೆ ಪಂದ್ಯದ ನಂತರದ ಘಟನೆಗಳಿಗೆ ಸಂಬಂಧ ಐದು ಡಿಮೆರಿಟ್ ಅಂಕಗಳನ್ನು ಐಸಿಸಿ ನೀಡಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ರವಿ ಬಿಷ್ಣೋಯಿ ಅವರು ಬಾಂಗ್ಲಾದೇಶ ತಂಡದ ಅವಿಶೇಕ್ ದಾಸ್ ಅವರನ್ನು ಔಟ್ ಮಾಡಿದ ನಂತರ ಅವರ ಮೇಲೆ ಬಳಸಿದ ಭಾಷೆ, ನಿಂಧನೆಗೆ ಸಂಬಂಧ ಭಾರತದ ಸ್ಪಿನ್ನರ್‌ಗೆ ಐಸಿಸಿ ಎರಡು ಡಿಮೆರಿಟ್ ಅಂಕ ವಿಧಿಸಿದೆ.
ಪಂದ್ಯದ ಸೋಲಿನ ಬಳಿಕ ತೀವ್ರ ನಿರಾಸೆಗೆ ಒಳಗಾಗಿದ್ದ ಭಾರತ ತಂಡದ ನಾಯಕ ಪ್ರಿಯಮ್ ಗರ್ಗ್," ಬಾಂಗ್ಲಾ ಆಟಗಾರರು ವರ್ತನೆ ಅಸಹ್ಯ ಮೂಡಿಸಿತ್ತು. ಇಂಥ ಘಟನೆ ನಡೆಯಬಾರದಿತ್ತು ಎಂದು ಭಾವಿಸುತ್ತೇನೆ. ಆದರೂ ಪರವಾಗಿಲ್ಲ ನಾವು ಸಮಾಧಾನವಾಗಿ ವರ್ತಸಿದೆವು. ಇದೆಲ್ಲವು ಆಟದ ಒಂದು ಭಾಗ ಎಂದು ಭಾವಿಸಿದೆವು,'' ಎಂದು ಹೇಳಿದರು. ನಾವು ಒಂದನ್ನು ಗೆದ್ದುಕೊಂಡರೆ , ಮತ್ತೊಂದನ್ನು ಕಳೆದುಕೊಳ್ಳುತ್ತೇವೆ ಎಂದು ಪ್ರಿಯಮ್ ಬಾಂಗ್ಲಾ ತಂಡವನ್ನು ಪರೋಕ್ಷವಾಗಿ ಟೀಕಿಸಿದರು. ತಂಡದ ಆಟಗಾರರ ದುರ್ವರ್ತನೆ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶ ತಂಡದ ನಾಯಕ ಅಕ್ಬರ್ ಅಲಿ, ’’ಈ ರೀತಿಯ ಘಟನೆ ನಡೆಯಬಾರದಿತ್ತು. ಅಲ್ಲಿ ಏನು ನಡೆಯಿತು ಎಂಬ ಬಗ್ಗೆ ನನಗೂ ಸರಿಯಾದ ಮಾಹಿತಿ ಇಲ್ಲ. ಆದರೆ, ಪೈನಲ್ ಪಂದ್ಯದಲ್ಲಿ ಆಟಗಾರರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವು ಎದುರಾಳಿ ತಂಡವನ್ನು ವಿಶ್ವಾಸದಿಂದ ಕಾಣಬೇಕಿತ್ತು. ಕ್ರೀಡೆಯನ್ನು ಗೌರವಿಸಬೇಕು. ಕ್ರಿಕೆಟ್ ಜಂಟಲ್‌ಮ್ಯಾನ್‌ಗಳ ಆಟ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿತ್ತು. ತಂಡದ ಪರ ನಾನು ಕ್ಷಮೆ ಕೋರುತ್ತೇನೆ, ಎಂದು ತಿಳಿಸಿದ್ದಾರೆ.