ವ್ಯಕ್ತಿಗೆ ಬೆಲೆ ಕೊಡುವುದಕ್ಕಿಂತ ಅವನಲ್ಲಿರುವ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು : ವೀರಣ್ಣ ಒಡ್ಡೀನ

ಧಾರವಾಡ 15: ನಮಗೆ ವ್ಯಕ್ತಿ ಮುಖ್ಯವಲ್ಲ, ವ್ಯಕ್ತಿತ್ವ ಮುಖ್ಯ. ವ್ಯಕ್ತಿಗೆ ಬೆಲೆ ಕೊಡುವುದಕ್ಕಿಂತ ಅವನಲ್ಲಿರುವ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.  

ಅವರು ಕ.ವಿ.ವ. ಸಂಘದ ಮಕ್ಕಳ ಮಂಟಪವು, ಕರಡಿಗುಡ್ಡದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ  ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ’ ಕುರಿತು ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವವು ನಿಮ್ಮ ಒಳ್ಳೆಯ ಭವಿಷ್ಯ ನಿರ್ಮಿಸುತ್ತದೆ. ಶಾಲಾ ಹಂತದಲ್ಲಿ ಧನಾತ್ಮಕ ಚಿಂತನೆ ಆತ್ಮ ವಿಶ್ವಾಸ, ಪ್ರಾಮಾಣಿಕತೆ ಹಿತಮಿತವಾದ ಮಾತುಗಾರಿಕೆ ತಾಳ್ಮೆಯ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಬದುಕು ಸುಂದರವಾಗುತ್ತದೆ. ಅಂತಹ ಬದುಕೇ ಸಾರ್ಥಕ ಬದುಕು, ಜೀವನದಲ್ಲಿ ಬದುಕಿನ ಅವಧಿ ಮುಖ್ಯವಾಗಬಾರದು. ಹೇಗೆ ಬದುಕಿದೆವು ಎಂಬುದು ಮುಖ್ಯ. ವಿದ್ಯಾರ್ಥಿಗಳು ಮಾನವೀಯತೆಯ ಹಸನಾದ ಬದುಕು ಸಾಗಿಸಬೇಕೆಂದರು. 

ಕ.ವಿ.ವ. ಸಂಘದ ಮಕ್ಕಳ ಮಂಟಪದ ಸಂಚಾಲಕ ಪ್ರೊ. ಧನವಂತ ಹಾಜವಗೋಳ ಮಾತನಾಡಿ, ನಿಮ್ಮ ವ್ಯಕ್ತಿತ್ವ ವಿಕಾಸಕ್ಕೆ ಭಾಷೆಯೂ ಮುಖ್ಯ. ವಿದ್ಯಾರ್ಥಿಗಳು ಭಾಷಾ ಪ್ರಭುತ್ವ ಹೊಂದಿದರೆ ನಿಮ್ಮ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ. ಬದುಕು ಸುಂದರವಾಗುತ್ತದೆ. ವಿದ್ಯಾರ್ಥಿಗಳಿಗೆ ಭಾಷೆ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವ ಕೌಶಲ ಉತ್ತಮ  ಪಡಿಸಿಕೊಳ್ಳಬೇಕೆಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ನಂದೀಶ ಕಾಖಂಡಕಿ ಮಾತನಾಡಿ, ವಿದ್ಯಾರ್ಥಿಗಳ ಶಬ್ದ ಬಳಕೆಯ ಮೇಲೆ ಅವರ ವ್ಯಕ್ತಿತ್ವ ರೂಪಗೊಳ್ಳುತ್ತದೆ. ನಿಮ್ಮ ವ್ಯಕ್ತಿತ್ವದಿಂದ ಮಾತ್ರ ಸಮಾಜದಲ್ಲಿ ಒಳ್ಳೆಯ ಗೌರವ ನಿಮಗೆ ಸಿಗುತ್ತದೆ ಎಂದು ಹೇಳಿದರು.  

ಕಾಲೇಜಿನ ಸಿ.ಬಿ.ಸಿ. ಉಪಾಧ್ಯಕ್ಷ ಮಹಾಬಳೇಶ್ವರ ಸಂಗಪ್ಪನವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಉಪನ್ಯಾಸಕ ಮಂಜುನಾಥ ಮುದಕಪ್ಪನವರ, ಪುಷ್ಪಾ ಐರಸಂಗ ಇದ್ದರು.  

ಪ್ರಕಾಶ ಸೋಜಾ ಸ್ವಾಗತಿಸಿದರು. ಪ್ರಕಾಶ ಸುಣಗಾರ ನಿರೂಪಿಸಿದರು. ಮಾರುತಿ ಪೂಜಾರಿ ವಂದಿಸಿದರು.