ಶಿವಮೊಗ್ಗ, ಫೆ 4 ,ಮಧ್ಯ ಪ್ರದೇಶ ವಿರುದ್ಧದ 2019-20ನೇ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿದೆ.ಇಲ್ಲಿನ ಜವಾಹರ್ ಲಾಲ್ ನೆಹರು ಎಂಜಿನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 31 ಓವರ್ ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ. ಆ ಮೂಲಕ ಸಂಕಷ್ಟಕ್ಕೆ ಸಿಲುಕಿದೆ.ಆರಂಭಿಕರಾಗಿ ಕಣಕ್ಕೆ ಇಳಿದ ರವಿಕುಮಾರ್ ಸಮರ್ಥ್ ಹಾಗೂ ದೇವದತ್ತ ಪಡಿಕ್ಕಲ್ ಜೋಡಿ ತಂಡದ ಮೊತ್ತ 4 ರನ್ ಇರುವಾಗಲೇ ಬೇರ್ಪಟ್ಟಿತು. ಕೇವಲ ಮೂರು ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಅವರನ್ನು ರವಿ ಯಾದವ್ ಶೂನ್ಯಕ್ಕೆ ಔಟ್ ಮಾಡಿದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ರೋಹನ್ ಕದಮ್ ಕೇವಲ 9 ರನ್ ಗಳಿಸಿ ಗೌರವ್ ಯಾದವ್ ಅವರಿಗೆ ಶರಣಾದರು. ನಂತರ ಜತೆಯಾದ ರವಿಕುಮಾರ್ ಸಮರ್ಥ್ ಹಾಗೂ ನಾಯಕ ಕರುಣ್ ನಾಯರ್ ಜೋಡಿಯು 29 ರನ್ ಜತೆಯಾಟವಾಡಿ ತಂಡಕ್ಕೆ ಭರವಸೆ ತುಂಬಿದೆ.ಒಂದು ತುದಿಯಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿರುವ ಆರ್.ಸಮರ್ಥ್ 103 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ ಮತ್ತೊಂದು ತುದಿಯಲ್ಲಿ ಕರುಣ್ 44 ಎಸೆತಗಳಲ್ಲಿ 13 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 31 ಓವರ್ ಗಳಿಗೆ 64 /2 (ಆರ್.ಸಮರ್ಥ್ ಔಟಾಗದೆ 25, ಕರುಣ್ ನಾಯರ್ ಔಟಾಗದೆ 13; ರವಿ ಯಾದವ್ 19 ಕ್ಕೆ 1, ಗೌರವ್ ಯಾದವ್ 6 ಕ್ಕೆ 1)