ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ, ಡ್ರಾನತ್ತ ಪಂದ್ಯ

ಶಿವಮೊಗ್ಗ, ಫೆ 7, ಇಲ್ಲಿನ ಜವಾಹರ್ ಲಾಲ್ ನೆಹರು ಎಂಜಿನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕರ್ನಾಟಕ ಹಾಗೂ ಮಧ್ಯ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗಲಿದೆ. ಇಂದು ಬೆಳಗ್ಗೆ 4 ವಿಕೆಟ್ ಕಳೆದುಕೊಂಡು 311 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಮಧ್ಯ ಪ್ರದೇಶ ತಂಡ 156.4 ಓವರ್ ಗಳಿಗೆ  431 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡ 5 ರನ್ ಮುನ್ನಡೆ ಪಡೆಯಿತು. ಪಂದ್ಯ ಡ್ರಾನಲ್ಲಿ ಮುಕ್ತಾಯವಾಗುವುದು ಬಹುತೇಕ ಖಚಿತವಾಗಿದ್ದು, ಇನಿಂಗ್ಸ್ ಮುನ್ನಡೆಯೊಂದಿಗೆ ಮಧ್ಯ ಪ್ರದೇಶ ಮೂರು ಅಂಕಗಳನ್ನು ಪಡೆದರೆ, ಆತಿಥೇಯರು ಕೇವಲ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಳ್ಳಲಿದೆ.

  ಮೂರನೇ ದಿನ ಭರ್ಜರಿ ಶತಕ ಸಿಡಿಸಿದ್ದ ಆದಿತ್ಯ ಶ್ರೀವಾಸ್ತವ ಇಂದು ಕೂಡ ಅದೇ ಬ್ಯಾಟಿಂಗ್ ಮುಂದುವರಿಸಿದರು. 339 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 25 ಬೌಂಡರಿಯೊಂದಿಗೆ 192 ರನ್ ಗಳಿಸಿದರು. ಇನ್ನೇನು ದ್ವಿಶತಕದಂಚಿನಲ್ಲಿ ಇದ್ದ ಅವರನ್ನು ಕೆ.ಗೌತಮ್ ಪೆವಿಲಿಯಮ್ ಹಾದಿ ತೋರಿಸಿದರು. ಇವರ ವಿಕೆಟ್ ಉರುಳುತ್ತಿದ್ದಂತೆ ಮಧ್ಯ ಪ್ರದೇಶದ ತಂಡ ಆಲೌಟ್ ಆಯಿತು.ಇದಕ್ಕೂ ಮುನ್ನ ವೆಂಕಟೇಶ್ ಅಯ್ಯರ್(80) ಇಂದು ಕೇವಲ ಆರು ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದ್ದರು. ಇವರ ವಿಕೆಟ್ ಉರುಳಿದ ಬಳಿಕ ಹಿಮಾಂಶು ಮೂರು ರನ್ ಗಳಿಸಿ ಔಟಾದರೆ, ಕುಮಾರ ಕಾರ್ತಿಕೇಯ, ರವಿ ಯಾದವ್ ಮತ್ತುಗೌರವ್ ಯಾದವ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.ಕರ್ನಾಟಕದ ಪರ ಅಭಿಮನ್ಯು ಮಿಥುನ್ ಮೂರು ವಿಕೆಟ್ ಪಡೆದರೆ, ರೋನಿತ್ ಮೋರೆ ಮತ್ತು ಕೆ.ಗೌತಮ್ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

 ಕರ್ನಾಟಕ ಪ್ರಥಮ ಇನಿಂಗ್ಸ್: 426

  ಮಧ್ಯ ಪ್ರದೇಶ ಪ್ರಥಮ ಇನಿಂಗ್ಸ್: 156.4 ಓವರ್ ಗಳಿಗೆ 431/10 (ಆದಿತ್ಯ ಶ್ರೀವಾಸ್ತವ 192, ವೆಂಕಟೇಶ್ ಅಯ್ಯರ್ 86; ಅಭಿಮನ್ಯು ಮಿಥುನ್ 69 ಕ್ಕೆ 3, ರೋನಿತ್ ಮೋರೆ 93 ಕ್ಕೆ 2, ಕೆ.ಗೌತಮ್ 99 ಕ್ಕೆ 2)