ರಣಜಿ: ಕರ್ನಾಟಕದ ಸವಾಲು ಎದುರಿಸಲಿದೆ ಮಧ್ಯ ಪ್ರದೇಶ

ಶಿವಮೊಗ್ಗ, ಫೆ.3 :     ರಣಜಿ ಟ್ರೋಫಿ ಎಲೈಟ್ “ಬಿ” ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಮಧ್ಯ ಪ್ರದೇಶ ತಂಡಗಳು ಕಾದಾಟ ನಡೆಸಲಿದ್ದು, ಆತಿಥೇಯ ತಂಡ ಗೆಲುವಿನ ಕನಸು ಕಾಣುತ್ತಿದೆ.   

ಟೂರ್ನಿಯಲ್ಲಿ ಕರ್ನಾಟಕ ಆಡಿದ ಆರು ಪಂದ್ಯಗಳಲ್ಲಿ ಮೂರು ಜಯ, ಮೂರು ಡ್ರಾ ಕಂಡಿದ್ದು, 24 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಧ್ಯ ಪ್ರದೇಶ ಆರು ಪಂದ್ಯಗಳಿಂದ ಎಂಟು ಅಂಕ ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.   

ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಅವರು ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು. ದೇವದತ್ 11 ಇನ್ನಿಂಗ್ಸ್ ಗಳಲ್ಲಿ 6 ಅರ್ಧಶತಕ ಹಾಗೂ 2 ಶತಕ ಬಾರಿಸಿ ಅಬ್ಬರಿಸಿದ್ದಾರೆ. ಅಲ್ಲದೆ 56ರ ಸರಾಸರಿಯಲ್ಲಿ 504 ರನ್ ಕಲೆ ಹಾಕಿ ಆರ್ಭಟಿಸಿದ್ದಾರೆ. ಉಳಿದಂತೆ ಆರ್.ಸಮರ್ಥ್ 272, ಕರುಣ್ ನಾಯರ್ 198, ಶ್ರೇಯಸ್ ಗೋಪಾಲ್ 193, ಕೆ.ಗೌತಮ್ 114 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.   

ವೇಗದ ಬೌಲರ್ ಅಭಿಮನ್ಯು ಮಿಥುನ್ 20, ಪ್ರತೀಕ್ ಜೈನ್ 15, ಕೆ.ಗೌತಮ್ 14, ರೋನಿತ್ ಮೋರೆ 15  ವಿಕೆಟ್ ಪಡೆದು ಮಿಂಚಿದ್ದಾರೆ.   

ಮಧ್ಯ ಪ್ರದೇಶ ತಂಡದ ಸ್ಟಾರ್ ಬ್ಯಾಟ್ಸ್ ಮನ್ ರಮೀಜ್ ಖಾನ್ ಆರು ಪಂದ್ಯಗಳ 10 ಇನ್ನಿಂಗ್ಸ್ ಗಳಲ್ಲಿ 41ರ ಸರಾಸರಿಯಲ್ಲಿ 410 ರನ್ ಸೇರಿಸಿದ್ದರು. ಯಶ್ ದುಬೆ 334, ವೆಂಕಟೇಶ್ ಅಯ್ಯರ್ 298, ಅಜಯ್ ರೋಹರ್ 261 ರನ್ ಬಾರಿಸಿ ಮಿಂಚಿದ್ದಾರೆ. ಬೌಲಿಂಗ್ ನಲ್ಲಿ ಅವೀಶ್ ಖಾನ್ 28, ಗೌರವ್ ಯಾದವ್, ಈಶ್ವರ್ ಪಾಂಡೆ 14 ವಿಕೆಟ್ ಪಡೆದು ಎದುರಾಳಿಗಳನ್ನು ಕಾಡಬಲ್ಲರು. 

ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಉಭಯ ತಂಡದ್ದಾಗಿದ್ದು, ಗೆಲುವು ಯಾರ ಪಾಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.