ರಣಜಿ: ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಕರ್ನಾಟಕ

ಬೆಂಗಳೂರು, ಫೆ.12 ;   ಒತ್ತಡದ ಸನ್ನಿವೇಶದಲ್ಲಿ ಹೇಗೆ ಆಡಬೇಕು ಎಂಬುದನ್ನು ಚೆನ್ನಾಗಿ ಅರಿತಿರುವ ಕರ್ನಾಟಕ, ಬರೋಡಾ ವಿರುದ್ಧ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದೆ.  

ಮೊದಲ ದಿನದ ಪಂದ್ಯದಲ್ಲಿ ಒಟ್ಟು 17 ವಿಕೆಟ್ ಗಳು ಬಿದ್ದವು. ಮೊದಲ ಇನ್ನಿಂಗ್ಸ್ ನಲ್ಲಿ ಬರೋಡಾ 85 ರನ್ ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಎಳು ವಿಕೆಟ್ ಗೆ 165 ರನ್ ಕಲೆ ಹಾಕಿದೆ. ಎರಡನೇ ದಿನಕ್ಕೆ ಎಸ್.ಶರತ್ (19) ಹಾಗೂ ಅಭಿಮನ್ಯು ಮಿಥುನ್ (9) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆತಿಥೇಯ ತಂಡ 80 ರನ್ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದು, ಉತ್ತಮ ಮೊತ್ತದತ್ತ ದೃಷ್ಟಿ ನೆಟ್ಟಿದೆ.   

ಟಾಸ್ ಸೋತರೂ ಬರೋಡಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿತು. ಬರೋಡಾ ತಂಡ ಕರ್ನಾಟಕದ ತಂಡದ ಬಿಗುವಿನ ದಾಳಿ ಎದುರಿಸುವಲ್ಲಿ ವಿಫಲವಾಯಿತು. ಪ್ರವಾಸಿ ತಂಡದ ಆರಂಭಿಕ ಬ್ಯಾಟ್ಸ್ ಮನ್ ಅಹ್ಮದ್ನೂರ್ ಪಠಾಣ್ 83 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 45 ರನ್ ಬಾರಿಸಿ, ಒಂಬತ್ತನೇ ಬ್ಯಾಟ್ಸ್ ಮನ್ ಆಗಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡ 20 ರನ್ ಸಿಡಿಸಿದರು.   

ಆತಿಥೇಯ ತಂಡದ ಸ್ಟಾರ್ ಬೌಲರ್ ಅಭಿಮನ್ಯು ಮಿಥುನ್ ಹಾಗೂ ಸ್ಪಿನ್ ಬೌಲರ್ ಕೆ.ಗೌತಮ್ ತಲಾ ಮೂರು ವಿಕೆಟ್ ಕಬಳಿಸಿದರು. ಯುವ ವೇಗಿ ಪ್ರಸಿದ್ಧ ಕೃಷ್ಣ ಎರಡು ವಿಕೆಟ್ ಉರುಳಿಸಿದರು.  

ಮೊದಲ ಇನ್ನಿಂಗ್ಸ್ ಆರಂಭಿಸಿದ ಆರ್.ಸಮರ್ಥ್ (11) ಹಾಗೂ ದೇವದತ್ ಪಡಿಕ್ಕಲ್ (6) ತಂಡಕ್ಕೆ ಭರ್ಜರಿ ಆರಂಭ ನೀಡಲಿಲ್ಲ. ಮೂರನೇ ವಿಕೆಟ್ ಗೆ ಕೆ.ವಿ ಸಿದ್ಧಾರ್ಥ್ ಹಾಗೂ ಕರುಣ್ ನಾಯರ್ ಜೋಡಿ ತಂಡಕ್ಕೆ ಚೇತರಿಕೆ ನೀಡಿತು. ಈ ಜೋಡಿ ತಂಡ ಇನ್ನಿಂಗ್ಸ್ ಮುನ್ನಡೆಯ ಕನಸಿಗೆ ನೀರು ಹಾಕಿತು. 27 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಈ ಜೋಡಿ 88 ರನ್ ಸೇರಿಸಿತು. ಸಿದ್ಧಾರ್ಥ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 29 ರನ್ ಸೇರಿಸಿತು. 

ನಾಯಕ ಕರುಣ್ ನಾಯರ್ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಿದರು. ಇವರು 75 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 47 ರನ್ ಬಾರಿಸಿದರು.   

ಮಧ್ಯಮ ಕ್ರಮಾಂಕದಲ್ಲಿ ಪವನ್ ದೇಶಪಾಂಡೆ (15), ಶ್ರೇಯಸ್ ಗೋಪಾಲ್ (0) ರನ್ ಕಲೆ ಹಾಕಲಿಲ್ಲ. ಆಲ್ ರೌಂಡರ್ ಕೆ.ಗೌತಮ್ ತಮ್ಮ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗೌತಮ್ 16 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 27 ರನ್ ಬಾರಿಸಿ ಮುನ್ನಡೆ ಹಿಗ್ಗಿಸಿದರು. ಬರೋಡಾ ತಂಡದ ಪರ ಸೋಯೆಬ್ ಸೊಪಾರಿಯಾ ಮೂರು ವಿಕೆಟ್ ಪಡೆದರು.