ಬೆಳಗಾವಿ 11: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಮಂಗಳವಾರ ಚಿಲಿ ದೇಶದ ಅರಿಕಾ ನಗರದ ಯೂನಿವರ್ಸಿಡಾಡ್ ಡಿ ತರಪಾಕಾ (Universidad De Tarapaca Arica-chile)ದೊಂದಿಗೆ ಮಂಗಳವಾರ ಸಿಂಡಿಕೇಟ್ ಸಭಾಂಗಣದಲ್ಲಿ ಶೈಕ್ಷಣಿಕ ಒಡಂಬಡಿಕೆ ಒಪ್ಪಂದ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿ.ಎಂ ತ್ಯಾಗರಾಜ ಇವರು ಮಾತನಾಡಿ, ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳ ಪ್ರಗತಿಗಾಗಿ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಜ್ಞಾನ ಮತ್ತು ಸಂಶೋಧನೆ ಗುಣಮಟ್ಟವು ವೃದ್ಧಿಸುತ್ತದೆ ಎಂದರು.
ಯೂನಿವರ್ಸಿಡಾಡ್ ಡಿ ತರಪಾಕಾ ವಿವಿಯ ಉನ್ನತ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಡೇವಿಡ್ ಲಾರೋಜ್ ಅವರು ಮಾತನಾಡಿ, ಭಾರತ ಮತ್ತು ಚಿಲಿ ದೇಶದ ಮಧ್ಯದ ಈ ಶೈಕ್ಷಣಿಕ ಒಪ್ಪಂದ ಮೂಲಕ ಪರಸ್ಪರ ಜ್ಞಾನ ಮತ್ತು ಸಂಶೋಧನೆಗಳ ವಿನಿಮಯದಿಂದ ಈ ಎರಡು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸುತ್ತದೆ ಎಂದರು.
ಆರ್‌ಸಿಯು ಕುಲಸಚಿವ ಸಂತೋಷ ಕಾಮಗೌಡ, ಕೆ.ಎ.ಎಸ್., ಪ್ರೊ. ಶಿವಾನಂದ ಗೋರನಾಳೆ, ಉದ್ಯೋಗ ಕೋಶದ ನಿರ್ದೇಶಕ ಪ್ರೊ. ಆರ್. ಎನ್. ಮನಗೂಳಿ ಇವರು ಹಾಜರಿದ್ದರು.