ರಣಜಿ: ಸೌರಾಷ್ಟ್ರ ಸವಾಲು ಎದುರಿಸಲಿದೆ ಕರ್ನಾಟಕ

ರಾಜ್ ಕೋಟ್, ಜ.10 :             ರಣಜಿ ಟೂರ್ನಿಯ ಎಲೈಟ್ ಎ ಹಾಗೂ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ಕಾದಾಟ ನಡೆಸಲಿದ್ದು, ಶ್ರೇಯಸ್ ಗೋಪಾಲ್ ತಂಡ ಗೆಲುವಿನ ಕನಸು ಕಾಣುತ್ತಿದೆ.  

ಎಲೈಟ್ ಎ ಹಾಗೂ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಜಯ, ಎರಡು ಡ್ರಾ ಸಾಧಿಸಿರುವ ರಾಜ್ಯ ತಂಡ 16 ಅಂಕ ಕಲೆ ಹಾಕಿದೆ. ಸೌರಾಷ್ಟ್ರ ನಾಲ್ಕು ಪಂದ್ಯಗಳಲ್ಲಿ 2 ಜಯ, 1 ಸೋಲು, 1 ಡ್ರಾನೊಂದಿಗೆ 13 ಅಂಕ ಸೇರಿಸಿದ್ದು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.   

ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ಈ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದು, ಸಪ್ತ ಪದಿ ತುಳಿಯಲಿದ್ದಾರೆ. ರಾಜ್ಯ ತಂಡದ ದೇವದತ್ ಪಡಿಕ್ಕಲ್ ಆಡಿರುವ ನಾಲ್ಕು ಪಂದ್ಯಗಳಲ್ಲಿ 4 ಅರ್ಧಶತಕ, 1 ಅರ್ಧಶತಕದ ನೆರವಿನಿಂದ 372 ರನ್ ಸಿಡಿಸಿದ್ದಾರೆ. ಇವರು ಸೌರಾಷ್ಟ್ರ ವಿರುದ್ಧ ರನ್ ಮಹಲ್ ಕಟ್ಟಲು ಪ್ಲಾನ್ ಮಾಡಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್.ಸಮರ್ಥ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸೊಗಸಾದ ಬ್ಯಾಟಿಂಗ್ ನಡೆಸಿದ್ದು, ಭರವಸೆ ಮೂಡಿಸಿದ್ದಾರೆ. ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಸಹ ರನ್ ಕಲೆ ಹಾಕಿ ಮಿಂಚಬಲ್ಲರು. ಬಿ.ಆರ್.ಶರತ್ (148) ದೊಡ್ಡ ಇನ್ನಿಂಗ್ಸ್ ಕಟ್ಟುವ ಯೋಜನೆ ಹೆಣೆದುಕೊಂಡಿದ್ದಾರೆ.   

ಕರ್ನಾಟಕದ ಸ್ಟಾರ್ ಬೌಲರ್ ಗಳಾದ ಕೆ.ಗೌತಮ್ (14), ವಿ.ಕೌಶಿಕ್ (13), ಅನುಭವಿ ವೇಗಿ ಅಭಿಮನ್ಯು ಮಿಥುನ್ (13) ರನ್ ಗಳಿಗೆ ಕಡಿವಾಣ ಹಾಕಿ ವಿಕೆಟ್ ಕೀಳುವ ಸಾಮಥ್ರ್ಯ ಹೊಂದಿದ್ದಾರೆ. ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಯ ಮೂಲಕ ಎದುರಾಳಿಯನ್ನು ಕಾಡಬಲ್ಲರು.   

ಸೌರಾಷ್ಟ್ರ ಪರ ಹಾರ್ವಿಕ್ ದೇಸಾಯಿ (198), ಸ್ನೇಲ್ ಪಟೇಲ್ (154), ಚೇತೇಶ್ವರ್ ಪೂಜಾರ್ (145), ಶೇಲ್ಡಾನ್ ಜಾಕ್ಸನ್ (120), ಅರ್ಪಿತ್ ವಾಸವಾಡ (150), ಧರ್ಮೆಂದ್ರಸಿಂಹ ಜಡೇಜಾ (159) ರನ್ ಕಲೆ ಹಾಕಿದ್ದು, ಭರವಸೆ ಮೂಡಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಯದೇವ್ ಉನಾದ್ಕಟ್ ವಿಕೆಟ್ ಬೇಟೆ ನಡೆಸಬಲ್ಲರು.