ರಣಜಿ: ಸಂಘಟಿತ ಆಟದ ಪ್ರದರ್ಶನ ನೀಡಿದ ಕರ್ನಾಟಕ

ಬೆಂಗಳೂರು, ಫೆ.13 :   ಸಂಘಟಿತ ಆಟದ ಪ್ರದರ್ಶನ ನೀಡಿದ ಕರ್ನಾಟಕ ತಂಡ, ಪ್ರವಾಸಿ ಬರೋಡ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಎರಡನೇ ದಿನದ ಗೌರವ ತನ್ನದಾಗಿಸಿಕೊಂಡಿದೆ.  

ಗುರುವಾರ ಏಳು ವಿಕೆಟ್ ನಷ್ಟಕ್ಕೆ 165 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಟಕ 233 ರನ್ ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಬರೋಡಾ ಬ್ಯಾಟ್ಸ್ ಮನ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪರಿಣಾಮ ದಿನದಾಟದಂತ್ಯಕ್ಕೆ ಐದು ವಿಕೆಟ್ ಗೆ 208 ರನ್ ಕಲೆ ಹಾಕಿದ್ದು, 60 ರನ್ ಗಳ ಮುನ್ನಡೆ ಸಾಧಿಸಿದೆ.  

ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಉತ್ತಮ ಆಟದ ಪ್ರದರ್ಶನ ನೀಡಿತು. ಬುಧವಾರ 9 ರನ್ ಗಳಿಸಿದ್ದ ಅಭಿಮನ್ಯು ಮಿಥುನ್ ಬಿರುಸಿದ ಬ್ಯಾಟಿಂಗ್ ನಡೆಸಿದರು. ತಮ್ಮ ನೈಜ ಆಟ ಪ್ರದರ್ಶಿಸಿದ ಮಿಥುನ್ 46 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 40 ರನ್ ಸಿಡಿಸಿದರು.  

ಉಳಿದಂತೆ ಎಸ್ ಶರತ್ 6 ಬೌಂಡರಿ ಸೇರಿದಂತೆ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಬರೋಡಾ ಪರ ಸೊಯೆನ್ ಸೊಪಾರಿಯಾ ಐದು ವಿಕೆಟ್ ಕಬಳಿಸಿದರು. ಅಭಿಮನ್ಯು ಸಿಂಗ್ ರಜಪುತ್ ಹಾಗೂ ಭಾರ್ಗವ್ ಭಟ್ ತಲಾ ಎರಡು ವಿಕೆಟ್ ಪಡೆದರು. 

ಎರಡನೇ ಇನ್ನಿಂಗ್ಸ್ ಆರಂಭಿಸಿದ ಬರೋಡಾ ತಂಡದ ಆರಂಭಿಕ ಬ್ಯಾಟ್ಸ್ ಮನ್ ಅಹ್ಮದ್ನೂರ್ ಪಠಾಣ್ ಹಾಗೂ ಕೇದಾರ್ ಜಾದವ್ ಮೊದಲ ವಿಕೆಟ್ ಗೆ ಸಾಧಾರಣ ಜೊತೆಯಾಟ ನೀಡಿದರು. ವಿಷ್ಣು ಸೋಳಂಕಿ (2) ರನ್ ಕಲೆ ಹಾಕುವಲ್ಲಿ ವಿಫಲರಾದರು.  

ಮೂರನೇ ವಿಕೆಟ್ ಗೆ ಅಹ್ಮದ್ನೂರ್ ಪಠಾಣ್ ಹಾಗೂ ದೀಪಕ್ ಹೂಡ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಕರ್ನಾಟಕ ತಂಡದ ಬೌಲರ್ ಗಳು ವಿಫಲರಾದರು. ಈ ಜೋಡಿ 94 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ದೀಪಕ್ 71 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ರೋನಿತ್ ಮೋರೆ ಅವರಿಗೆ ವಿಕೆಟ್ ಒಪ್ಪಿಸಿದರು.  

ನಾಯಕ ಕೃನಾಲ್ ಪಾಂಡ್ಯ (5) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಬ್ಯಾಟ್ಸ್ ಮನ್ ಅಹ್ಮದ್ನೂರ್ ಪಠಾಣ್ 162 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 90 ರನ್ ಸಿಡಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು.  

ಮೂರನೇ ದಿನಕ್ಕೆ ಅಭಿಮನ್ಯು ಸಿಂಗ್ (ಅಜೇಯ 31) ಹಾಗೂ ಪಿ.ಕೆ.ಕೊಹ್ಲಿ (ಅಜೇಯ 4) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕದ ಪರ ಪ್ರಸಿದ್ಧ ಕೃಷ್ಣ ಹಾಗೂ ರೋನಿತ್ ಮೋರೆ ತಲಾ ಎರಡು ವಿಕೆಟ್ ಪಡೆದರು.