ರಣಜಿ: ಉತ್ತಮ ಮೊತ್ತದತ್ತ ಬಂಗಾಳ, ಗುಜರಾತ್

parthiva

ನವದೆಹಲಿ, ಫೆ.20- 86ನೇ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಗುಜರಾತ್ ಹಾಗೂ ಬಂಗಾಳ ತಂಡಗಳು ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿವೆ. 

ವಲ್ಸದ್ ಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಗುಜರಾತ್ ಹಾಗೂ ಗೋವಾ ಕಾದಾಟ ನಡೆಸಿದವು. ಮೊದಲು ಬ್ಯಾಟ್ ಮಾಡಿದ ಗುಜರಾತ್ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 330 ರನ್ ಕಲೆ ಹಾಕಿದೆ. ಸಮಿತ್ ಘೋಷಾಲ್ 52, ಪ್ರಿಯಾಂಕ್ ಪಾಂಚಾಲ್ 28 ರನ್ ಬಾರಿಸಿ ಔಟ್ ಆದರು. ಮೂರನೇ ವಿಕೆಟ್ ಗೆ ಭಾರ್ಗವ್ ಮೀರೈ ಹಾಗೂ ನಾಯಕ ಪಾರ್ಥಿವ್ ಪಟೇಲ್ ಜೋಡಿ ಶತಕದ ಜೊತೆಯಾಟವನ್ನು ನೀಡಿತು. ಭಾರ್ಗವ್ 12 ಬೌಂಡರಿ ಸೇರಿದಂತೆ 84 ರನ್ ಸೇರಿಸಿದರೆ, ಪಾರ್ಥಿವ್ ಪಟೇಲ್ ಟೂರ್ನಿಯಲ್ಲಿ ಮತ್ತೊಮ್ಮೆ ಮೂರಂಕಿ ದಾಟಿ ಸಂಭ್ರಮಿಸಿದು. ಪಾರ್ಥಿವ್ 15 ಬೌಂಡರಿ ಸಹಾಯದಿಂದ 118 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಎರಡನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಬಂಗಾಳ, ಒಡಿಶಾ ಫೈಟ್ ನಡೆಸಿದವು. ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡ ಉತ್ತಮ ಬ್ಯಾಟಿಂಗ್ ನಡೆಸಿದೆ. ಅನುಸ್ತಪ್ ಮಜುಂದಾರ್ 194 ಎಸೆತಗಳಲ್ಲಿ 20 ಬೌಂಡರಿ ನೆರವಿನಿಂದ 136 ರನ್ ಸಿಡಿಸಿದರು. ಇನ್ನೋರ್ವ ಆಟಗಾರ ಶಹಬಾಜ್ ಅಹ್ಮದ್ 13 ಬೌಂಡರಿ ಸೇರಿದಂತೆ 82 ರನ್ ಸೇರಿಸಿದ್ದಾರೆ. ಬಂಗಾಳ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 308 ರನ್ ಕಲೆ ಹಾಕಿದೆ. ಸೌರಾಷ್ಟ್ರ ಹಾಗೂ ಆಂಧ್ರ ತಂಡಗಳ ನಡುವಿನ ಎಂಟರ ಘಟ್ಟದ ಪಂದ್ಯದಲ್ಲಿ ಸೌರಾಷ್ಟ್ರ ದಿನದಾಟದಂತ್ಯಕ್ಕೆ ಆರು ವಿಕೆಟ್ ಗೆ 226 ರನ್ ಕಲೆ ಹಾಕಿದೆ.