ಬೆಳಗಾವಿ ಉಸ್ತುವಾರಿಯಾಗಿ ರಮೇಶ್ ಜಾರಕಿಹೊಳಿ, ಹಾಸನ ಕೆ.ಗೋಪಾಲಯ್ಯಗೆ ಹಂಚಿಕೆ

ಬೆಂಗಳೂರು, ಜೂ.2 ,ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ಈ ಮೊದಲು ಹಾಸನ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಜೆ.ಸಿ.ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು. ಇದೀಗ ಆ ಜವಾಬ್ದಾರಿಯನ್ನು ಕೆ.ಗೋಪಾಲಯ್ಯ ಅವರಿಗೆ ನೀಡಲಾಗಿದೆ.ಈ ಮೊದಲು ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ನೀಡಲಾಗಿತ್ತು. ಶೆಟ್ಟರ್ ಕೈಯಿಂದ ಬೆಳಗಾವಿಯನ್ನು ಪಡೆದು ಅದನ್ನು ನಿರೀಕ್ಷೆಯಂತೆ ರಮೇಶ್ ಜಾರಕಿಹೊಳಿಗೆ ನೀಡಲಾಗಿದೆ. 

ಬೆಳಗಾವಿ ಉಸ್ತುವಾರಿ ಸ್ಥಾನದ ಮೇಲೆ ಈ ಮೊದಲು ಶಶಿಕಲಾ ಜೊಲ್ಲೆ, ಲಕ್ಷ್ಮಣ್ ಸವದಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಪೈಪೋಟಿ ಉಂಟಾಗಿದ್ದರಿಂದ ಮೂರನೇ ವ್ಯಕ್ತಿಯಾದ  ಜಗದೀಶ್ ಶೆಟ್ಟರ್ ಅವರಿಗೆ ನೀಡಿ ಪೈಪೋಟಿ ನಡೆಯದಂತೆ ಮುಖ್ಯಮಂತ್ರಿ ತಡೆದಿದ್ದರು. ಇದೀಗ ಅನಿವಾರ್ಯವಾಗಿ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ನೀಡಿದ್ದಾರೆ.ಹಾಸನ ಉಸ್ತುವಾರಿಯನ್ನು ಬಿ.ಗೋಪಾಲಯ್ಯ ಅವರಿಗೆ ನೀಡಲಾಗಿದೆ. ಗೋಪಾಲಯ್ಯ ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದರು. ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ಅಲ್ಲಿ ದೇವೇಗೌಡ ಕುಟುಂಬವನ್ನು ಎದುರಿಸಲು ಗೋಪಾಲಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.ಈ ಮಧ್ಯೆ ಶಾಸಕ ಮಹೇಶ್ ಕುಮಠಹಳ್ಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಸ್ಥಾನ ನೀಡ ಸರ್ಕಾರದ ಆದೇಶ ಹೊರಡಿಸಿದೆ.